ನೇಗಿನಹಾಳ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ : ಡೆತ್ ನೋಟ್‌ನಲ್ಲೇನಿದೆ?

ಬೈಲಹೊಂಗಲ: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡ ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಪಾರ್ಥಿವ ಶರೀರದ ಬಳಿ ಡೆತ್ ನೋಟ್ ಪತ್ತೆಯಾಗಿದೆ.
ಭಾನುವಾರ ರಾತ್ರಿ ಮಠದ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ವಾಮೀಜಿಗಳು ಬರೆದಿದ್ದು ಎಂದು ಹೇಳಲಾಗುವ ಡೆತ್ ನೋಟ್ ಒಂದು ಪತ್ತೆಯಾಗಿದೆ.

ಡೆತ್ ನೋಟ್‌ನಲ್ಲಿ ಏನಿದೆ..?
ಕ್ಷಮಿಸಿಬಿಡಿ ಭಕ್ತರೆ. ನಾನು ಯಾವುದೇ ತಪ್ಪು‌ ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು. ಹಡೆದ ತಾಯಿ ನನ್ನ ಕ್ಷಮಿಸು. ಶ್ರೀಮಠದ ಭಕ್ತರು ಹಾಗೂ ನೇಗಿನಹಾಳ ಗ್ರಾಮಸ್ಥರು ಎಲ್ಲರೂ ಸೇರಿಕೊಂಡು ಶ್ರೀಮಠವನ್ನು ಮುನ್ನಡೆಸಿ. ಶ್ರೀಮಠದ ಮಕ್ಕಳೇ ನನ್ನನ್ನು ಕ್ಷಮಿಸಿ. ನಾನು ಈ ಹಾದಿಯನ್ನು ಹಿಡಿಯಲು ನಾನೇ ಕಾರಣ. ಶ್ರೀ ಮಠದ ಈಗಿನ ಕಮಿಟಿಯವರು ಮತ್ತು ನೇಗಿನಹಾಳ ಭಕ್ತರು ಎಲ್ಲರೂ ಕೂಡಿಕೊಂಡು ಶ್ರೀ ಮಠವನ್ನು ಮುನ್ನಡೆಸಿ. ಹಡೆದ ತಾಯಿ ನನ್ನನ್ನು ಕ್ಷಮಿಸಿ ಬಿಡು. ಶ್ರೀ ಮಠದವರೇ ನನ್ನನ್ನು ಕ್ಷಮಿಸಿ. ನನ್ನ ಪಯಣ ಬಸವ ಮಡಿವಾಳೇಶನೆಡೆಗೆ. ಜೈ ಬಸವೇಶ, ಜೈ ಮಡಿವಾಳೇಶ ಶರಣು ಶರಣಾರ್ಥಿ, ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ ನೇಗಿಹಾಳ ಬಸವ ಸಿದ್ದಲಿಂಗ ಸ್ವಾಮಿಗಳು” ಎಂದು ಡೆತ್ ನೋಟ್ ಬರೆದಿಟ್ಟು ಶ್ರೀಗಳು ನೇಣಿಗೆ ಶರಣಾಗಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಪ್ರಾಥಮಿಕ ಮಾಹಿತಿಯ ಪ್ರಕಾರ ಮುರುಘಾ ಶ್ರೀಗಳ ಪ್ರಕರಣದ ಬಗ್ಗೆ ಇಬ್ಬರು ಮಹಿಳೆಯರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಭಾನುವಾರ ವೈರಲ್ ಆಗಿತ್ತು. ಅದರಲ್ಲಿ ಮಹಿಳೆಯರು ನೇಗಿನಹಾಳ ಸ್ವಾಮೀಜಿ ಹೆಸರನ್ನು ಸಹ ಉಲ್ಲೇಖಿಸಿ ಅವರು ಚಾರಿತ್ರ್ಯದ ಬಗ್ಗೆ ಮಾತನಾಡಿದ್ದರು ಎಂದು ಹೇಳಲಾಗಿದೆ. ಇದರಿಂದ ಸ್ವಾಮೀಜಿ ಆಘಾತಗೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ನಿನ್ನೆ ತಡ ರಾತ್ರಿವರೆಗೆ ಭಕ್ತರೊಂದಿಗೆ ಸಮಾಲೋಚನೆ ನಡೆಸಿದ ಸ್ವಾಮೀಜಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ ಈ ಘಟನೆಯಿಂದ ಬದುಕಿರಬಾರದು ಎಂದೆನಿಸಿದೆ ಎಂದು ಹೇಳಿದ್ದರು ಎನ್ನಲಾಗಿದೆ.
ಬಸವಸಿದ್ಧಲಿಂಗ ಸ್ವಾಮೀಜಿ ಬಾಲ್ಯದ ಶಿಕ್ಷಣ ಹಾಗೂ ಅಧ್ಯಾತ್ಮ ಶಿಕ್ಷಣ ಚಿತ್ರದುರ್ಗದ ಮುರುಘಾ ಮಠದಲ್ಲಾಗಿದೆ ಎನ್ನಲಾಗಿದೆ. .2007 ರಲ್ಲಿ ಮಡಿವಾಳೇಶ್ವರ ಪೀಠ ಅಲಂಕರಿಸಿದ್ದ ಶ್ರೀಗಳು 15ವರ್ಷಗಳಿಂದ ಮಡಿವಾಳೇಶ್ವರ ಪೀಠಾಧಿಪತಿಯಾಗಿದ್ದರು. ಅವರು ನಿನ್ನೆ ರಾತ್ರಿಯೂ ಸಹ ಭಕ್ತರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಇಂದು ಮಠದ ಆವರಣ ಕೊಠಡಿಯಲ್ಲೇ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement