ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮುರುಘಾ ಶರಣರಿಗೆ ಸೆಪ್ಟೆಂಬರ್ 14ರ ವರೆಗೆ ನ್ಯಾಯಾಂಗ ಬಂಧನ

ಚಿತ್ರದುರ್ಗ: ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಶರಣರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಇಂದು, ಸೋಮವಾರ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುರುಘಾ ಶರಣರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿದರು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮುರುಘಾ ಶರಣರಿಗೆ ಸೆಪ್ಟೆಂಬರ್ 14ರವರೆಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಮತ್ತೆ ಸ್ವಾಮೀಜಿಯನ್ನು ಮತ್ತೆ ಕಸ್ಟಡಿಗೆ ಕೇಳಿಲ್ಲ. ಹೀಗಾಗಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಕೋರ್ಟ್ 9 ದಿನ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪೊಲೀಸರು, ಮುರುಘಾ ಶರಣರನ್ನು ಬಿಗಿ ಬಂದೋಬಸ್ತಿನಲ್ಲಿ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದ್ದು, ಜಿಲ್ಲಾ ಕಾರಾಗೃಹ ಮುಂಭಾಗ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀಗಳ ಪ್ರಕರಣದಲ್ಲಿ ಪೊಲೀಸರು ಭಾನುವಾರ ಮಠದಲ್ಲಿ ಸ್ಥಳಗಳ ಮಹಜರು ಮಾಡಿದ್ದಾರೆ. ಸಂತ್ರಸ್ತ ಬಾಲಕಿಯರು ಸೂಚಿಸಿದ್ದ ಪ್ರತೀ ಸ್ಥಳದಲ್ಲೂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸ್ವಾಮೀಜಿ ಕೊಠಡಿ, ಸ್ನಾನದ ಕೋಣೆ, ಕೊಠಡಿ ಮುಂಭಾಗ, ಸ್ಕೈಯ್ ವಾಕ್ ಸಮೀಪ ಹಾಗೂ ಹಾಸ್ಟೆಲ್ ಬಳಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಮಠದ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಚಿತ್ರದುರ್ಗದ ಮುರುಘಾ ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿರುವ ಅಪ್ರಾಪ್ತ ಬಾಲಕಿಯರಿಗೆ ಮುರುಘಾ ಶರಣರು ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನಲ್ಲಿದ್ದ ಒಡನಾಡಿ ಸೇವಾ ಸಂಸ್ಥೆಯ ಸಹಾಯ ಪಡೆದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಸ್ವಾಮೀಜಿ ವಿರುದ್ಧ ಪೋಕ್ಸೋ (Pocso) ಪ್ರಕರಣ ದಾಖಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement