ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಕಾಂಗ್ರೆಸ್‌ ಮಾಜಿ ರಾಷ್ಟ್ರೀಯ ವಕ್ತಾರ ಬ್ರಿಜೇಶ್‌ ಕಾಳಪ್ಪ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಮಾಜಿ ರಾಷ್ಟ್ರೀಯ ವಕ್ತಾರ ಹಾಗೂ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಅವರು ಆಮ್‌ ಆದ್ಮಿ ಪಾರ್ಟಿಗೆ ಸೋಮವಾರ ಸೇರ್ಪಡೆಯಾದರು.
ಬೆಂಗಳೂರಿನ ಹೊಟೇಲ್‌ ಪರಾಗ್‌ನಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಎಪಿಯ ಕರ್ನಾಟಕ ಉಸ್ತುವಾರಿ ದಿಲೀಪ್‌ ಪಾಂಡೆ ಅವರು ಬ್ರಿಜೇಶ್‌ ಕಾಳಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ದೇಶದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಹಂಬಲವಿರುವ ನಾಯಕರಲ್ಲಿ ಬ್ರಿಜೇಶ್‌ ಕಾಳಪ್ಪ ಒಬ್ಬರು. ರಾಜಕೀಯ ಹಾಗೂ ಆಡಳಿತದಲ್ಲಿ ಆಮ್‌ ಆದ್ಮಿ ಪಾರ್ಟಿಯು ಬದಲಾವಣೆ ತಂದಿರುವುದನ್ನು ಮನಗಂಡು ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜನಪರ ಕಾಳಜಿಯಿರುವವರಿಗೆ ಎಎಪಿಯು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಬ್ರಿಜೇಶ್‌ ಕಾಳಪ್ಪರವರು ಕಾಂಗ್ರೆಸ್‌ ನಾಯಕರಾಗಿ, ಅದರ ರಾಷ್ಟ್ರೀಯ ವಕ್ತಾರರಾಗಿ, ಸುಪ್ರೀಂಕೋರ್ಟ್‌ ವಕೀಲರಾಗಿ, ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ, ಹರಿಯಾಣ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ. ಕಾವೇರಿ, ಕೃಷ್ಣ, ಮಹದಾಯಿ ನದಿಗಳ ನೀರು ಹಂಚಿಕೆ ವಿವಾದಗಳಿಗೆ ಸಂಬಂಧಿಸಿ ಕರ್ನಾಟಕದ ಪರ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿದ್ದಾರೆ ಎಂದು ಪೃಥ್ವಿ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಪಕ್ಷದ ಮಾಧ್ಯಮ ವಕ್ತಾರ ಕೆ. ಮಥಾಯಿ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement