ಉಮೇಶ ಕತ್ತಿ ನಿಧನ ಹಿನ್ನೆಲೆ: ರಾಜ್ಯದಲ್ಲಿ 3 ದಿನ ಶೋಕಾಚರಣೆ, ಬಿಜೆಪಿ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ

ಬೆಳಗಾವಿ: ದೊಡ್ಡಬಳ್ಳಾಪುರದಲ್ಲಿ ನಾಳೆ, ಸೆಪ್ಟೆಂಬರ್‌ 8ರಂದು (ಗುರುವಾರ) ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್‌ 11ಕ್ಕೆ ‌ಮುಂದೂಡಲಾಗಿದೆ.
ಸಚಿವ ಉಮೇಶ್​ ಕತ್ತಿ ಅವರ ನಿಧನದ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಇರಲಿದ್ದು, ಈ ವೇಳೆ ಯಾವುದೇ ಸರ್ಕಾರಿ ಕಾರ್ಯಕ್ರಮ‌ಗಳು ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ವಿ. ಕತ್ತಿ (62) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಉಮೇಶ್​ ಕತ್ತಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಲ್ಲದ ಬಾಗೇವಾಡಿಗೆ ತೆರಳುವ ಮುನ್ನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಆತ್ಮಿಯ ಸ್ನೇಹಿತ, ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ ಉಮೇಶ ಕತ್ತಿ ನಿಧನರಾಗಿದ್ದಾರೆ. ಭಾರ ಹೃದಯದಿಂದ ಬೆಳಗಾವಿಗೆ ಬಂದಿದ್ದೇನೆ. ರಾಜ್ಯ ಸರ್ಕಾರದಿಂದ ಗೌರವ ಸಲ್ಲಿಸಲಾಗುತ್ತದೆ. ಮೂರು ದಿನ ಶೋಕಾಚರಣೆ ಮಾಡಲು ನಿರ್ಧರಿಸಲಾಗಿದೆ. ತುರ್ತಾಗಿ ಪ್ರವಾಹ ನಿರ್ವಹಣೆ ಬಿಟ್ಟರೆ 3 ದಿನ ಯಾವುದೇ ಸರ್ಕಾರಿ ಕಾರ್ಯಕ್ರಮ‌ ನಡೆಯವುದಿಲ್ಲ. ನಾಳೆ ಸೆಪ್ಟೆಂಬರ್‌ 8ರಂದು ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್‌ 11ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಈ ಹಿಂದೆ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ದಿನದಂದು ಜನೋತ್ಸವನ್ನು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಇದೀಗ ಮತ್ತೊಮ್ಮೆ ಮುಂದೂಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಜನಪರ ಯೋಜನೆಗಳ ಬಗ್ಗೆ ಜನತೆಗೆ ತಿಳಿಸುವ ಉದ್ದೇಶದಿಂದ ರಾಜ್ಯದಲ್ಲಿ 7 ಕಡೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ದೊಡ್ಡಬಳ್ಳಾಪುರದಲ್ಲಿ ನಾಳೆ ಮೊದಲ ಜನೋತ್ಸವ ಕಾರ್ಯಕ್ರಮ ನಡೆಯಬೇಕಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement