ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ.
ಹಾಥ್‌ರಸ್‌ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗೆಂದು ತೆರಳಿದ್ದ ಮಲಯಾಳಂ ಸುದ್ದಿತಾಣ ಅರಿಮುಖಂ ವರದಿಗಾರ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ದೆಹಲಿ ಘಟಕದ ಕಾರ್ಯದರ್ಶಿ ಸಿದ್ದೀಕ್‌ ಕಪ್ಪನ್ ಸೇರಿದಂತೆ ಮೂವರನ್ನು 2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು.
ಸೌಹಾರ್ದತೆಗೆ ಭಂಗ ತರುವ ಉದ್ದೇಶದಿಂದ ಕಪ್ಪನ್ ಅವರು ಘಟನೆ ನಡೆದ ಪ್ರದೇಶಕ್ಕೆ ತೆರಳುತ್ತಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿತ್ತು. ತಪ್ಪು ಮಾಹಿತಿಗಳಿಂದ ಕೂಡಿದ ಜಾಲತಾಣ ನಡೆಸಲು ಮತ್ತು ಹಿಂಸಾಚಾರ ಪ್ರಚೋದನೆಗೆ ಅವರು ಹಣ ಸಂಗ್ರಹಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಮತ್ತು ನ್ಯಾ. ರವೀಂದ್ರ ಭಟ್‌ ಮತ್ತು ಪಿ ಎಸ್‌ ನರಸಿಂಹ ಅವರ ಪೀಠವು ಪ್ರತಿಯೊಬ್ಬ ವ್ಯಕ್ತಿಯೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಹೊಂದಿದ್ದಾರೆ ಎಂದು ಹೇಳಿತು. ಪ್ರಾಸಿಕ್ಯೂಷನ್‌ ಸಲ್ಲಿಸಿರುವ ಕಪ್ಪನ್‌ಗೆ ಸಂಬಂಧಿಸಿದ್ದು ಎನ್ನಲಾದ ಟೂಲ್‌ಕಿಟ್‌ ವಿದೇಶಿ ಭಾಷೆಯಲ್ಲಿದೆ ಎಂದು ನ್ಯಾಯಾಲಯ ಅದರ ಸುತ್ತ ಮಂಡಿಸಲಾದ ವಾದಗಳನ್ನು ತಿರಸ್ಕಿರಿಸಿತು.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

“ಪ್ರತಿಯೊಬ್ಬ ವ್ಯಕ್ತಿಯೂ ಮುಕ್ತ ಅಭಿವ್ಯಕ್ತಿಯ ಹಕ್ಕು ಹೊಂದಿದ್ದಾರೆ. ಅವರು (ಕಪ್ಪನ್) ಹಾಥ್‌ರಸ್‌ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು, ಇದರ ಪರ ದನಿ ಎತ್ತಬೇಕು ಎಂದು ತೋರಿಸಲು ಪ್ರಯತ್ನಿಸುತ್ತಿದ್ದರು. ಇದು ಕಾನೂನಿನಡಿ ಅಪರಾಧವೇ?” ಎಂದು ವಿಚಾರಣೆ ವೇಳೆ ಪೀಠವು ಪ್ರಶ್ನಿಸಿತು.
ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರು ಹಾಥ್‌ರಸ್‌ ಘಟನೆಯ ಸುತ್ತ ವಿವಾದವನ್ನು ಸೃಷ್ಟಿಸಲಾಗಿತ್ತು. ಇದನ್ನು ಬಳಸಿಕೊಂಡು ಪಿಎಫ್‌ಐ ಗಲಭೆ ಸೃಷ್ಟಿಸಲು ಮುಂದಾಗಿತ್ತು. ಕಪ್ಪನ್‌ ಈ ಸಂಚಿನ ಭಾಗವಾಗಿದ್ದರು ಎಂದು ಜಾಮೀನು ಮನವಿ ವಿರೋಧಿಸಿದರು.

ಹಾಥ್‌ರಸ್‌ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಉದ್ದೇಶವನ್ನಿರಿಸಿಕೊಂಡು ಪ್ರಧಾನಿ ಮೋದಿಯವರ ರಾಜೀನಾಮೆಯನ್ನು ಕೊಡಿಸುವುದು ಇದರ ಹಿಂದಿನ ಕಾರ್ಯಸೂಚಿಯಾಗಿತ್ತು. ಈ ನಿಟ್ಟಿನಲ್ಲಿ ಇಮೇಲ್‌ಗಳನ್ನು, ನಿರ್ದೇಶನಗಳನ್ನು ನೀಡಲಾಗಿತ್ತು… ಮುಂತಾಗಿ ಜೇಠ್ಮಲಾನಿ ವಾದಿಸಿದರು.
ಆದರೆ, ಪೀಠವು ಈ ವಾದಗಳನ್ನು ತಳ್ಳಿಹಾಕಿತು. ಉತ್ತಮ ಬದಲಾವಣೆಗಾಗಿ ಕೆಲವೊಮ್ಮೆ ಪ್ರತಿಭಟನೆಗಳು ಅಗತ್ಯವಿರುತ್ತವೆ ಎಂದು ನಿರ್ಭಯಾ ಪ್ರಕರಣದ ವೇಳೆ ನಡೆದ ಪ್ರತಿಭಟನೆಗಳನ್ನು ಉದಾಹರಿಸಿತು. ಅದರಿಂದಾಗಿ ಕಾನೂನಿನಲ್ಲಿ ತರಲಾದ ರಚನಾತ್ಮಕ ಬದಲಾವಣೆಗಳನ್ನು ಉದಾಹರಿಸಿತು. ಅಲ್ಲದೆ, ಕಪ್ಪನ್‌ ಗಲಭೆಗಳಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿಗಳೇನಿವೆ? ಎಂದು ಕೇಳಿತು.
ಅಂತಿಮವಾಗಿ ಜಾಮೀನು ನೀಡಿದ ನ್ಯಾಯಾಲಯ, ಮುಂದಿನ ಆರು ವಾರಗಳ ಕಾಲ ಕಪ್ಪನ್‌ ದೆಹಲಿಯಲ್ಲಿ ತಂಗಿರಬೇಕು. ಈ ವೇಳೆ ಜಂಗ್‌ಪುರ ಪೊಲೀಸ್‌ ಠಾಣೆಗೆ ಹಾಜರಿ ಹಾಕಬೇಕು. ಆರು ವಾರಗಳ ನಂತರ ಅವರು ಕೇರಳಕ್ಕೆ ಹೋಗಬಹುದು. ಅಲ್ಲಿಯೂ ಅವರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಹಾಜರಿ ಹಾಕಬೇಕು ಎಂದು ನಿರ್ದೇಶಿಸಿತು. ಬಿಡುಗಡೆಗೂ ಮುನ್ನ ಕಪ್ಪನ್‌ ತಮ್ಮ ಪಾಸ್‌ಪೋರ್ಟ್‌ಅನ್ನು ನ್ಯಾಯಾಲಯದ ವಶಕ್ಕೆ ನೀಡಬೇಕು ಎಂದು ಸೂಚಿಸಿತು.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement