ನಂದಿನಿ ಹಾಲು ದರ ಲೀಟರಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್‍ ಸಭೆಯಲ್ಲಿ ಒಮ್ಮತದ ನಿರ್ಣಯ, ಸರ್ಕಾರದ ಅನುಮತಿಯಷ್ಟೇ ಬಾಕಿ

ಬೆಂಗಳೂರು: ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್‌) ನಿರ್ಧರಿಸಿದೆ. ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಕೆಎಂಎಫ್‌ನ ಉನ್ನತ ಮೂಲಗಳು ತಿಳಿಸಿವೆ. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಹಾಲು ಮಾರಾಟ ದರ ಹೆಚ್ಚಿಸುವಂತೆ ಕಳೆದ 8 ತಿಂಗಳಿಂದ ಕೆಎಂಎಫ್‌ನ ಮೇಲೆ ಒತ್ತಡ ಹೇರುತ್ತಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಸರಕಾರಕ್ಕೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಮುಖ್ಯಮಂತ್ರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ರೈತರ ಅನುಕೂಲಕ್ಕಾಗಿ ಶೀಘ್ರವೇ ಹಾಲು ಮಾರಾಟ ದರದಲ್ಲಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲೇಬೇಕು. ಬೆಲೆ ಹೆಚ್ಚಳದ ಸಂಪೂರ್ಣ ಲಾಭವನ್ನು ರೈತರಿಗೆ ತಲುಪಿಸಬೇಕೆಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು ಎಂದು ತಿಳಿದುಬಂದಿದೆ. ಈ ಕುರಿತು ಸರಕಾರದ ಅನುಮತಿ ಬಾಕಿ ಇದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ದೇಶದಲ್ಲಿ ಕೆಎಂಎಫ್ ಹೊರತುಪಡಿಸಿ ಉಳಿದೆಲ್ಲ ಬೇರೆ ಬೇರೆ ಖಾಸಗಿ ಬ್ರಾಂಡ್‍ಗಳು ಹಾಲಿನ ದರದಲ್ಲಿ ಭಾರಿ ಬದಲಾವಣೆ ಮಾಡಿವೆ. ಕೆಎಂಎಫ್ ಮಾತ್ರ ಪ್ರತಿ ಲೀಟರ್ ಹಾಲಿಗೆ 37 ರೂ.ಗಳನ್ನು ನೀಡುತ್ತಿದೆ. ಬೇರೆ-ಬೇರೆ ಬ್ರಾಂಡ್‍ಗಳಿಗೆ ಹೋಲಿಕೆ ಮಾಡಿದರೆ 8 ರಿಂದ 10 ರೂ.ಗಳು ವ್ಯತ್ಯಾಸ ಕಂಡುಬರುತ್ತಿದೆ. ರೈತರ ಹಿತಕ್ಕಾಗಿ ನಂದಿನಿ ಹಾಲಿನ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಿರುವ ಕೆಎಂಎಫ್, 3 ರೂ. ಹೆಚ್ಚಳ ಮಾಡಲು ಮುಂದಾಗಿದ್ದು ಏರಿಕೆ ಮಾಡಲಿರುವ ದರವನ್ನು ರೈತರಿಗೆ ನೀಡಲು ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ವಿಪರೀತ ಮಳೆಯಾಗುತ್ತಿರುವದರಿಂದ ರೈತರ ಬೆಳೆಗಳು ಹಾನಿಯಾಗಿವೆ. ಈ ಹಿನ್ನೆಲೆಯಲ್ಲಿ ರೈತರಿಗೆ ಉತ್ತೇಜಿಸಲು ಜೊತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಾಲಿನ ದರದಲ್ಲಿ ಏರಿಕೆ ಮಾಡುವುದು ಅನಿವಾರ್ಯ ಎಂದು ಕೆಎಂಎಫ್‍ನ ಬಲ್ಲ ಮೂಲಗಳು ತಿಳಿಸಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement