ನಿತೀಶ್ ಕುಮಾರ್​ಗೆ ಆಘಾತ: ಬಿಜೆಪಿ ಸೇರಿದ ಜೆಡಿಯುದ 15 ಜಿಲ್ಲಾ ಪಂಚಾಯತ​ ಸದಸ್ಯರು

ದಿಯು ಮತ್ತು ದಮನ್ : ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಆರ್​ಜೆಡಿ ಹಾಗೂ ಕಾಂಗ್ರೆಸ್‌ ಸೇರಿದಂತೆ ಏಳು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್​ ಕುಮಾರ್​​ಗೆ ಆಘಾತದ ಮೇಲೆ ಆಘಾತವಾಗುತ್ತಿದೆ. ನಿತೀಶ್​ ಕುಮಾರ್​​ ನೇತೃತ್ವದ ಜನತಾ ದಳ ಯುನೈಟೆಡ್(ಜೆಡಿಯು)ಗೆ ಅನೇಕರು ಸಾಮೂಹಿಕವಾಗಿ ಪಕ್ಷ ತೊರೆಯುತ್ತಿದ್ದಾರೆ.
ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ದಿಯು ಮತ್ತು ದಮನ್​​ನ ಜೆಡಿಯು ಘಟಕದ 17 ಜಿಲ್ಲಾ ಪಂಚಾಯತ​ ಸದಸ್ಯರ ಪೈಕಿ 15 ಮಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈವರೆಗೆ ಜೆಡಿಯುನ 18 ಜಿಲ್ಲಾ ಪರಿಷತ್ ಸದಸ್ಯರ ಪೈಕಿ 17 ಮಂದಿ ಬಿಜೆಪಿ ಸೇರಿದ್ದಾರೆ. ಈಗ 241 ಸದಸ್ಯರ ಪೈಕಿ ಬಿಜೆಪಿ 206 ಜಿಲ್ಲಾ ಪರಿಷತ್ ಸದಸ್ಯರನ್ನು ಹೊಂದಿದೆ. ಜತೆಗೆ ಜೆಡಿಯುನ 119 ಗ್ರಾಮ ಪಂಚಾಯತ ಸದಸ್ಯರ (ಜಿಪಿಎಂ) ಪೈಕಿ 100ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಬಿಜೆಪಿ ಈಗ 8332 ರಲ್ಲಿ 6530 ಸದಸ್ಯರನ್ನು ಹೊಂದಿದೆ. ಬಿಹಾರದಲ್ಲಿ ಇತ್ತೀಚಿನ ಬೆಳವಣಿಗೆಯ ನಂತರ ಜೆಡಿಯುಗೆ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಅರುಣಾಚಲ ಪ್ರದೇಶದಲ್ಲಿ 7 ಜೆಡಿಯು ಶಾಸಕರ ಪೈಕಿ 6 ಮಂದಿ ಬಿಜೆಪಿಗೆ ಸೇರಿದ್ದರು. ಆಗಸ್ಟ್ 25 ರಂದು, ಅರುಣಾಚಲ ಪ್ರದೇಶದ ಏಕೈಕ ಜೆಡಿಯು ಶಾಸಕ ಕೂಡ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದರು.
ನಂತರ ಮಣಿಪುರದ ಏಳು ಮಂದಿ ಜೆಡಿಯು ಶಾಸಕರ ಪೈಕಿ ಐವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮಣಿಪುರಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 60 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ 32 ಸ್ಥಾನಗಳಲ್ಲಿ ಗೆದ್ದು ಬಹುಮತ ಗಳಿಸಿತ್ತು.
ಈ ಐವರು ಶಾಸಕರ ಸೇರ್ಪಡೆಯೊಂದಿಗೆ ಮಣಿಪುರ ವಿಧಾನಸಭೆಯ 60 ಸೀಟ್​ಗಳ ಪೈಕಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು 49 ಸ್ಥಾನಗಳನ್ನು ಹೊಂದಿದಂತಾಗಿದೆ. ಜೆಡಿಯುನ 9 ಕಾರ್ಪೊರೇಟರ್‌ಗಳಲ್ಲಿ 8 ಮಂದಿ ಬಿಜೆಪಿ ಸೇರಿದ್ದಾರೆ. ಹೀಗಾಗಿ ಇದೀಗ ಒಟ್ಟು ಬಿಜೆಪಿ ಕಾರ್ಪೊರೇಟರ್‌ಗಳ ಸಂಖ್ಯೆ 20 ರಲ್ಲಿ 18 ಆಗಿದೆ.
ಬಿಹಾರದಲ್ಲಿ 2020 ರಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಮಾಡಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಆದರೆ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಆಗಸ್ಟ್ 9 ರಂದು ನಿತೀಶ್​ ಕುಮಾರ್​ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆರ್​ಜೆಡಿ ಜೊತೆ ಕೈ ಜೋಡಿಸಿ ಆಗಸ್ಟ್ 10 ರಂದು 8ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್​ ಕುಮಾರ್​ ಪ್ರಮಾಣ ವಚನ ಸ್ವೀಕರಿಸಿದ್ದರು. ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement