ಏಕನಾಥ್ ಶಿಂಧೆ ಪುತ್ರ ಸಿಎಂ ಕುರ್ಚಿ ಮೇಲೆ ಕುಳಿತಿರುವ ಫೋಟೋ ವೈರಲ್: ಶ್ರೀಕಾಂತ ಶಿಂಧೆ ಹೇಳಿದ್ದೇನು..?

ಥಾಣೆ: ‘ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಶಿವಸೇನಾದ ಸಂಸದ ಶ್ರೀಕಾಂತ್ ಶಿಂಧೆ ಅವರು ಮುಖ್ಯಮಂತ್ರಿಗಳಿಗೆ ಮೀಸಲಾದ ಖುರ್ಚಿಯಲ್ಲಿ ಕುಳಿತಿದ್ದಾರೆ. ಅವರು ಸೂಪರ್ ಸಿಎಂ ಆಗಿದ್ದಾರೆ’ ಎಂದು ಟೀಕಿಸಿರುವ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಈ ಫೋಟೊವನ್ನೇ ಇಟ್ಟುಕೊಂಡು ಪ್ರತಿಪಕ್ಷಗಳು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಏಕನಾಥ್ ಸಿಎಂ ಆದ್ರೆ, ಮಗ ಸೂಪರ್ ಸಿಎಂ’ ಎಂದು ಲೇವಡಿ ಮಾಡಿದ್ದಾರೆ.
ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋದ ಮುಂದೆ ಶ್ರೀಕಾಂತ್ ಕುರ್ಚಿಯ ಮೇಲೆ ಕುಳಿತಿರುವ ಚಿತ್ರವನ್ನು ಎನ್‌ಸಿಪಿ ವಕ್ತಾರ ರವಿಕಾಂತ್ ವರ್ಪೆ ಟ್ವೀಟ್ ಮಾಡಿದ್ದಾರೆ. ಫೋಟೋ ಕೆಳಗೆ ಇರಿಸಲಾಗಿರುವ ಬೋರ್ಡ್ ಮತ್ತು ಕುರ್ಚಿಯ ಹಿಂದೆ ‘ಮಹಾರಾಷ್ಟ್ರ ಸರ್ಕಾರ-ಮುಖ್ಯಮಂತ್ರಿ’ ಎಂದು ಬರೆಯಲಾಗಿದೆ. ಅವರನ್ನು ಸೂಪರ್ ಸಿಎಂ ಎಂದು ಕರೆದ ಎನ್‌ಸಿಪಿ ನಾಯಕ, “ಇದು ಯಾವ ರೀತಿಯ ರಾಜಧರ್ಮ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಕುರ್ಚಿಯ ಬಗ್ಗೆ ತಮಾಷೆ ಮಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ನನ್ನ ಸಹಾನುಭೂತಿ ಇದೆ ಎಂದು ಉದ್ಧವ ಬಣದ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. “ಆದಿತ್ಯ ಠಾಕ್ರೆ ಅವರು ಮಂತ್ರಿಯಾಗಿದ್ದರೂ ಸಹ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾಗ ಅವರಿಗೆ ಸಮಸ್ಯೆ ಇತ್ತು. ಆದರೆ ಏಕನಾಥ್ ಶಿಂಧೆ ಅವರ ಮಗ ಮಂತ್ರಿಯೂ ಅಲ್ಲ, ಶಾಸಕನೂ ಅಲ್ಲ” ಎಂದು ಅವರು ಹೇಳಿದ್ದಾರೆ. ಅಲ್ಲದೆ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

ಎನ್‌ಸಿ‍ಪಿ ಹಾಗೂ ಕಾಂಗ್ರೆಸ್ ಇದೇ ಫೋಟೊವನ್ನು ಇಟ್ಟುಕೊಂಡು ಏಕನಾಥ್ ಕೂಡಲೇ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಯ ಮಗ ಮುಖ್ಯಮಂತ್ರಿ ಕಿರ್ಚಿಯ ಪವಿತ್ರತೆಯನ್ನು ಹಾಳು ಮಾಡಿದ್ದಾರೆ’ ಎಂದು ಆರೋಪಿಸಿವೆ.
ಈ ಬಗ್ಗೆ ಇಂದು, ಶನಿವಾರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಸಂಸದ ಶ್ರೀಕಾಂತ್ ಶಿಂಧೆ, ‘ನಾನು ಮುಖ್ಯಮಂತ್ರಿಗಳ ಯಾವುದೇ ಅಧಿಕೃತ ಖುರ್ಚಿಯಲ್ಲಿ ಕುಳಿತುಕೊಂಡಿಲ್ಲ. ವಿನಾಕಾರಣ ವಿವಾದ ಮಾಡುವುದು ಸರಿಯಲ್ಲ. ನಾನು ಕುಳಿತಿದ್ದು ನಮ್ಮ ತಂದೆಯ ಥಾಣೆಯಲ್ಲಿರುವ ಮನೆಯ ಕಚೇರಿ ಒಳಗೆ. ಅದು ಮುಖ್ಯಮಂತ್ರಿಗಳ ಅಧಿಕೃತ ನಿವಾಸವೂ ಅಲ್ಲ. ಆ ಕುರ್ಚಿಯ ಹಿಂದೆ ಮುಖ್ಯಮಂತ್ರಿಗಳು ಎಂದು ನಾಮಫಲಕ ಇದ್ದಿದ್ದು ವಿವಾದಕ್ಕೆ ಕಾರಣವಾಗಿದೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಪಾರ ಗೌರವ ನೀಡುತ್ತೇನೆ’ ಎಂದು ಹೇಳಿದ್ದಾರೆ.
ಶಿಂಧೆ ಬಣದ ಸೇನಾ ನಾಯಕರು ಹಾಗೂ ಬಿಜೆಪಿ ನಾಯಕರು ಶ್ರೀಕಾಂತ್ ಶಿಂಧೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement