ಧಾರವಾಡದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಧೀಮಂತ ವ್ಯಕ್ತಿ ನ.ವಜ್ರಕುಮಾರ : ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ

ಧಾರವಾಡ: ಜೀವನದ ಪ್ರತಿ ಕ್ಷಣವನ್ನೂ ಸಾರ್ಥಕ ಮಾಡಿಕೊಳ್ಳಬೇಕು. ಒಂದು ಮರ ತಾನು ಧರೆಗುರುಳಿದ ನಂತರವೂ, ಪ್ರತಿ ಹಂತದಲ್ಲೂ ಪರೋಪಕಾರಿಯಾಗಿ ತನ್ನ ಜೀವನವನ್ನು ಮುಕ್ತಾಯಗೊಳಿಸುತ್ತದೆ. ನದಿ ಸಮುದ್ರ ಸೇರುವವರೆಗೂ ಪ್ರತಿಕ್ಷಣವೂ ತನ್ನನ್ನು ಇತರರಿಗೆ ಸಮರ್ಪಿಸಿಕೊಳ್ಳುತ್ತದೆ. ಆ ರೀತಿ ಮಾನವ ನಿಸರ್ಗ ನೋಡಿಯಾದರೂ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ವಜ್ರಕುಮಾರವರು ಬದುಕಿರುವ ವರೆಗೂ ತಮ್ಮ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟವರು. ವಿದ್ಯಾಸೌಧಗಳನ್ನು ನಿರ್ಮಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ  ಸ್ವಾಮೀಜಿ ಹೇಳಿದರು.
ಜೆಎಸ್ ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ದಿ. ಡಾ. ನ. ವಜ್ರಕುಮಾರ ಅವರ ಶ್ರದ್ಧಾಂಜಲಿ ಸಭೆಯಲ್ಲಿ
ಮಾತನಾಡಿದ ಅವರು, ಧಾರವಾಡದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ ಧೀಮಂತ ವ್ಯಕ್ತಿ ನ. ವಜ್ರಕುಮಾರ. ಅವರು, ಭೌತಿಕವಾಗಿ ನಮ್ಮೊಡನಿಲ್ಲವಾದರೂ ಅವರು ನಿರ್ಮಿಸಿದ ವಿದ್ಯಾಸೌಧಗಳಿಂದ ಪ್ರಜ್ವಲಿಸುವ ಕಿರಣಗಳು ಅವರನ್ನು ಅಜರಾಮರರನ್ನಾಗಿ ಮಾಡಿದೆ ಸ್ವಾಮೀಜಿ ಎಂದರು.

ಹು-ಧಾ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಹುಬ್ಬಳ್ಳಿ -ಧಾರವಾಡ ಮಹಾನಗರ ದೇಶದ ಶೈಕ್ಷಣಿಕ ಭೂಪಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ವಜ್ರಕುಮಾರ ಅವರು ಕೊಡುಗೆ ಅಪಾರ. ಅವರಲ್ಲಿ ಪೌರಪ್ರಜ್ಞೆ ಅಪಾರವಾಗಿತ್ತು. ಮಹಾನಗರಗಳ ಅಭಿವೃದ್ಧಿ ವಿಷಯದಲ್ಲಿ, ಸಮಾರಂಭಗಳನ್ನು ಅಚ್ಚುಕಟ್ಟಾಗಿ ನಡೆಸುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು ಎಂದು ಹೇಳಿದರು.
೧೯೭೩ರಲ್ಲಿ ಧಾರವಾಡಕ್ಕೆ ಆಗಮಿಸಿ ಕಳೆದ ಐವತ್ತು ವರ್ಷಗಳಿಂದ ಕೆ.ಜಿ.ಯಿಂದ ಪಿ.ಜಿ.ವರೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ನೈತಿಕ ತಳಹದಿಯ ಮೇಲೆ ಶಿಕ್ಷಣ ನೀಡುತ್ತ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಧಾರವಾಡ ಕರ್ಮಭೂಮಿಯಾಗಲು ಡಾ. ನ. ವಜ್ರಕುಮಾರ ಪ್ರಯತ್ನ ಅಗಾಧವಾದದ್ದು ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಆಡಳಿತ ಮಂಡಳಿ ಸದಸ್ಯರಾದ ಸುಧೀರ್ ಕುಸುನಾಳೆ, ಕಮಲ್ ಮೆಹ್ತಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ಆರ್.ಟಿ.ಜಂತ್ಲಿ ನುಡಿನಮನ ಸಲ್ಲಿಸಿದರು. ಪಲ್ಲವಿ ಖಾನಪೇಟ ಗೀತನಮನ ಸಲ್ಲಿಸಿದರು. ಮಹಾವೀರ ಉಪಾಧ್ಯೆ ನಿರೂಪಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement