ಉಡುಪಿ: ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯತ ನೀಡುವ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿಗೆ ಕನ್ನಡದ ಖ್ಯಾತ ನಟ ರಮೇಶ ಅರವಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 10ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಳೆದ ಹದಿನೇಳು ವರ್ಷಗಳಿಂದ ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡುತ್ತ ಬರಲಾಗುತ್ತಿದೆ. ರಮೇಶ್ ಅರವಿಂದ್ ಅವರ ನಿರೂಪಣೆ ಮತ್ತು ನಟನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಲಾಗಿದೆ.
ಕೋಟತಟ್ಟು ಗ್ರಾಮ ಪಂಚಾಯತ , ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.)ಕೋಟದ ಸಹಭಾಗಿತ್ವದಲ್ಲಿ ಕಳೆದ ಹದಿನೇಳು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದೆ. ಇಂದು, ಶನಿವಾರ ನಡೆದ ಸಭೆಯಲ್ಲಿ ರಮೇಶ ಅರವಿಂದ್ ಹೆಸರನ್ನ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಜಸ್ಟಿಸ್ ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಶ್ರೀಮತಿ ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ. ಎಂ ಹೆಗ್ಡೆ, ಪ್ರಕಾಶ್ ರೈ, ಶ್ರೀ ಪಡ್ರೆ, ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ , ಗಿರೀಶ್ ಭಾರದ್ವಾಜ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ 2022ರ ಸಾಲಿನಲ್ಲಿ ಹಲವು ದಶಕಗಳಿಂದ ಚಲನಚಿತ್ರ ಹಾಗೂ ಮನರಂಜನಾ ಮಾಧ್ಯಮ ಕ್ಷೇತ್ರದಲ್ಲಿ ನಟ, ನಿರ್ದೇಶಕ, ನಿರೂಪಕ, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿಯಾಗಿ ಸಾಧನೆ ಪರಿಗಣಿಸಿ ಡಾ.ರಮೇಶ ಅರವಿಂದ ಅವರನ್ನು ಈ ವರ್ಷದ ಡಾ, ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಕುಂದರ್ ಮಾಹಿತಿ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ