ಜಿಪಂ-ತಾಪಂ ಕ್ಷೇತ್ರಗಳ ಮರುವಿಂಗಡಣೆ ಮೀಸಲು ನಿಗದಿ: ಸರ್ಕಾರಕ್ಕೆ ಮತ್ತೆ 12 ವಾರಗಳ ಕಾಲಾವಕಾಶ ನೀಡಿದ ಹೈಕೋರ್ಟ್

ಬೆಂಗಳೂರು: ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಕ್ಷೇತ್ರಗಳ ಮರು ವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮತ್ತೆ 12 ವಾರ ಕಾಲಾವಕಾಶ ನೀಡಿದೆ.
ರಾಜ್ಯದಲ್ಲಿ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್‌ ಪಡೆದು, ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್‌ ರಾಜ್‌ ಮತ್ತು ಗ್ರಾಮ ಸ್ವರಾಜ್‌ ಕಾಯಿದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಸಲ್ಲಿಸಿರುವ ಪಿಐಎಲ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲು ನಿಗದಿ ಕಾರ್ಯ ಪೂರ್ಣಗೊಳಿಸಲು ಸರಕಾರಕ್ಕೆ 12 ವಾರ ಕಾಲಾವಕಾಶ ನೀಡಿ ಮೇ 24ರಂದು ಆದೇಶ ನೀಡಲಾಗಿತ್ತು. ಆದರೆ ಕ್ಷೇತ್ರ ಮರು ವಿಂಗಡಣೆ ಕೆಲಸ ಪೂರ್ಣಗೊಳಿಸಲು ಹೈಕೋರ್ಟ್‌ನಿಂದ ಮತ್ತೆ ಕಾಲಾವಕಾಶ ಪಡೆಯುವಂತೆ ಮರು ವಿಂಗಡಣೆ ಆಯೋಗವು ಸರಕಾರಕ್ಕೆ ಸೆಪ್ಟೆಂಬರ್‌ 9ರಂದು ಪತ್ರ ಬರೆದಿತ್ತು.
ಆ ಅರ್ಜಿ ಪುರಸ್ಕರಿಸಿದ ನ್ಯಾಯಪೀಠ, ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಇತರೆ ವರ್ಗಗಳಿಗೆ ಮೀಸಲು ಕಲ್ಪಿಸುವ ಮತ್ತು ಕ್ಷೇತ್ರ ಮರು ವಿಂಗಡಣೆ ಕಾರ್ಯವನ್ನು 12 ವಾರಗಳಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement