ರಾಜ್ಯದ ಪ್ರವಾಸಿ ಗೈಡ್‍ಗಳ ಮಾಸಿಕ ವೇತನ ಶೀಘ್ರವೇ 5000 ರೂ.ಗಳಿಗೆ ಹೆಚ್ಚಳ : ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ತಾಣಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಚುರಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಗೈಡ್‍ಗಳಿಗೆ ನೀಡಲಾಗುತ್ತಿರುವ ಮಾಸಿಕ ವೇತನವನ್ನು 2000 ರೂ.ಗಳಿಂದ 5000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೈಡ್‍ಗಳಿಗೆ ಈವರೆಗೂ ತಿಂಗಳಿಗೆ 2000 ರೂ.ಗಳ ವೇತನ ನೀಡಲಾಗುತ್ತಿತ್ತು. ಅದನ್ನು 5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವುದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿತ್ತು.ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ಟೂರಿಸ್ಟ್ ಗೈಡ್ ಸುಳ್ಳು ಹೇಳಬಾರದು, ಸರಿಯಾದ ಮಾರ್ಗದರ್ಶನ ಮಾಡಬೇಕು. ರಾಜ್ಯದ ಹಿರಿಮೆ ಹೆಚ್ಚಿಸಬೇಕು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ನಮ್ಮ ಸರ್ಕಾರ ಹೊಸದಾಗಿ ಕ್ಯಾರವಾನ್ ಸೌಲಭ್ಯ ಕಲ್ಪಿಸಿದೆ ಪ್ರವಾಸಿ ತಾಣ ಗುರುತಿಸಿ ಅಲ್ಲಿ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಾಜ್ಯಕ್ಕೆ ವಾರ್ಷಿಕ ಮೂವತ್ತು ಲಕ್ಷ ಜನ ಬರುತ್ತಿದ್ದು, ಪ್ರವಾಸೋದ್ಯಮಕ್ಕೆ ಮಹತ್ವ ನೀಡಿ, ಸೌಲಭ್ಯವನ್ನು ಇನ್ನಷ್ಟು ಉತ್ತಮಗೊಳಿಸಿ ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿಯಾಗಬೇಕೆಂದು ಗುರಿ ಹಾಕಿಕೊಳ್ಳಲಾಗಿದೆ. ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ವಿವಿಧ ಕಡೆ ಹೋಟೆಲ್ ಸ್ಥಾಪಿಸಲಾಗುತ್ತಿದೆ ಎಂದರು.
ಭಾರತದಲ್ಲಿ ಪ್ರವಾಸೋದ್ಯಮ ಬಹಳಷ್ಟು ಬೆಳೆದಿದೆ. ಇದು ಈಗ ಉದ್ಯಮವಾಗಿ ಬೆಳೆದಿದೆ. ಪೂರ್ವದಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ ಪ್ರವಾಸಿಗರು ಹೋಗುತ್ತಿದ್ದಾರೆ. ಜನರೂ ಕೂಡ ಉತ್ತಮ ಸೌಲಭ್ಯ ನಿರೀಕ್ಷಿಸುತ್ತಾರೆ.
ಪ್ರವಾಸಿಗರಿಗೆ ಉತ್ತಮ ಆಹಾರ, ಉತ್ತಮ ಗೈಡ್, ವಾಸ್ತವ್ಯ ಸೇರಿದಂತೆ ಅನೇಕ ನಿರೀಕ್ಷೆಗಳಿರುತ್ತವೆ. ನಮ್ಮ ರಾಜ್ಯದ ಇತಿಹಾಸ ನೋಡುವುದಾದರೆ ಇದು ನಾವು ಸೃಷ್ಟಿಸಿದ ಟೂರಿಸಂ ಅಲ್ಲ. ರಾಜಮಹಾರಾಜರ ಕಾಲದಲ್ಲೇ ಹತ್ತು ಹಲವಾರು ಕೋಟೆಗಳು ನಿರ್ಮಾಣವಾಗಿವೆ. ಹಿರಿಯರು ನಿರ್ಮಿಸಿರುವುದನ್ನು ನಾವು ಈಗ ಉತ್ತಮವಾಗಿ ಶೋಕೇಸ್ ಮಾಡಿದ್ದೇವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement