ಸಾಕಷ್ಟು ಮಾಹಿತಿ ಸಂಗ್ರಹಿಸಿದ ನಂತರವೇ ಪಿಎಫ್​ಐ, ಇತರ ಎಂಟು ಸಂಘಟನೆಗಳ ನಿಷೇಧ: ಸಿಎಂ ಬೊಮ್ಮಾಯಿ

ಬೆಂಗಳೂರು: ಪಿಎಫ್​ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ.
ಪಿಎಫ್​ಐ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಪಿಎಫ್​​ಐ ನಿಷೇಧಿಸುವಂತೆ ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರೂ ಮನವಿ ಮಾಡಿದ್ದೆವು. ಪಿಎಫ್​ ಸಂಘಟನೆಯನ್ನು ಯಾವಾಗ ನಿಷೇಧಿಸುವಿರಿ ಎಂದು ಹಲವರು ಪ್ರಶ್ನಿಸುತ್ತಿದ್ದರು. ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದೆ ಎಂದರು.
ಸಾಕಷ್ಟು ಮಾಹಿತಿ ಸಂಗ್ರಹಿಸಿ, ಎಲ್ಲ ರಾಜ್ಯಗಳಲ್ಲಿನ‌ ದಾವೆಗಳ ವಿವರ ಪಡೆದು, ಪೂರ್ವ ಸಿದ್ಧತೆ ಮಾಡಿಕೊಂಡ ನಂತರವೇ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ. ಹಲವು ಉಗ್ರಗಾಮಿ ಸಂಘಟನೆಗಳಿಗೆ ಪಿಎಫ್​ಐ ರಿಮೋಟ್​ ಕಂಟ್ರೋಲ್​ ಆಗಿ ಕೆಲಸ ಮಾಡುತ್ತಿತ್ತು. ಪಿಎಫ್​ಐ ಕಾರ್ಯಕರ್ತರು ದೇಶದ ಹಲವೆಡೆ ದುಷ್ಕೃತ್ಯ ನಡೆಸಲು ಮುಂದಾಗಿದ್ದರು. ಹಲವು ಗಲಭೆಗಳಲ್ಲಿ ಈ ಸಂಘಟನೆ ಚಿತಾವಣೆಯಿತ್ತು ಎಂದು ಬೊಮ್ಮಾಯಿ ತಿಳಿಸಿದರು.

ಪಿಎಫ್‌ಐ ನಿಷೇಧಿಸುವಂತೆ ಕಾಂಗ್ರೆಸ್, ಸಿಪಿಎಂ ಸೇರಿ ಹಲವು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಇಂತಹ ವಿಚ್ಛಿದ್ರಕಾರಿ ಶಕ್ತಿಗಳ ಜತೆಗೆ ಜನರು ಕೈಜೋಡಿಸಬಾರದು ಎಂದು ಮನವಿ ಮಾಡಿದರು.
ಕರಾವಳಿ ಪ್ರದೇಶ ಸೇರಿದಂತೆ ರಾಜ್ಯದಲ್ಲಿ ಅಗತ್ಯ‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲೆಡೆ ಬಿಗಿ ನಿಗಾವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆಯಲ್ಲಿ ಪಿಎಫ್​ಐ ನಿಷೇಧವನ್ನು ಸ್ವಾಗತಿಸಿದ್ದಾರೆ. ದುಷ್ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಪಿಎಫ್​ಐ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿದೆ. ಈ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಕೇಂದ್ರ ಸರ್ಕಾರವು ಬಲವಾದ ಸಾಕ್ಷ್ಯಾಧಾರ ಸಂಗ್ರಹಿಸಿದ ನಂತರವೇ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement