ಎಲ್ಲರ ಪ್ರೀತಿಯ ಎಲ್ಲರ ಮೇಷ್ಟ್ರು ಡಾ.ಲಿಂಗರಾಜ ಅಂಗಡಿಗೆ ಇಂದು ಸೇವಾ ನಿವೃತ್ತಿ ಬೀಳ್ಕೊಡುಗೆ, ʼಬುತ್ತಿ ಬಿಚ್ಚಿದಾಗʼ ಪುಸ್ತಕ ಬಿಡುಗಡೆ

(ಜಗದ್ಗುರು ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಿಬ್ಬಂದಿ ಕಲ್ಯಾಣ ವಿಭಾಗದಿಂದ ಸೆಪ್ಟೆಂಬರ್‌ ೩೦ರಂದು ಮಹಾವಿದ್ಯಾಲಯದ ಮೂಜಗಂ ಸಭಾಭವನದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರ ಹುದ್ದೆಯಿಂದ ನಿವೃತ್ತಿಯಾಗುತ್ತಿರುವಡಾ. ಲಿಂಗರಾಜ ಅಂಗಡಿಯವರ ಬೀಳ್ಕೊಡುಗೆ ಮತ್ತು “ಬುತ್ತಿ ಬಿಚ್ಚಿದಾಗ” ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ತನ್ನಿಮಿತ್ತ ಲೇಖನ)
ಸೇವಾ ನಿವೃತ್ತಿ ಹೊಂದುತ್ತಿರುವ ಡಾ. ಲಿಂಗರಾಜ ರುದ್ರಪ್ಪ ಅಂಗಡಿ ಅವರು ಎಲ್‌. ಆರ್‌. ಅಂಗಡಿ ಎಂದೇ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ, ಬಂಧುಗಳಿಗೆ ಚಿರಪರಿಚಿತರು. ಅರವತ್ತು ವರ್ಷ ವಯಸ್ಸಿನ (ಜನನ ೧೭.೦೯.೧೯೬೨) ಲಿಂಗರಾಜ ತಮ್ಮ ಪ್ರಾಥಮಿಕ ಶಿಕ್ಷಣವನ್ನು ನವಲಗುಂದ ತಾಲೂಕಿನ ಶಿರಕೋಳದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮೊರಬದಲ್ಲಿ, ಪದವಿ ಶಿಕ್ಷಣವನ್ನು ಸವದತ್ತಿಯಲ್ಲಿ, ಎಂ.ಎ. ಸ್ನಾತಕೋತ್ತರ ಮತ್ತು ಪಿ.ಎಚ್.ಡಿ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕಾನೂನು ಪದವಿಯನ್ನು ಕೆಪಿಇಎಸ್ ಕಾನೂನು ಮಹಾವಿದ್ಯಾಲಯದಿಂದ ಪಡೆದಿದ್ದಾರಲ್ಲದೆ, ಪಿಜಿಡಿಸಿಎ, ಮತ್ತು ಪಿಜಿಡಿಎಎಸ್ ಪಡೆದುಕೊಂಡಿದ್ದಾರೆ.
೧೯೮೬ ರಲ್ಲಿ ಕಾರವಾರ ಜಿಲ್ಲೆಯ ಉಳಗಾ ಮಹಾರಾಣಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಆರಂಭಿಸಿ, ಅಲ್ಲಿ ೧೯೯೦ ವರೆಗೆ ಕಾರ‍್ಯ ನಿರ್ವಹಿಸಿದ್ದಾರೆ. ೧೧.೧೦.೧೯೯೦ ರಿಂದ ನಗರ ಶ್ರೀ ಜಗದ್ಗುರು ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಸೇವೆ ಆರಂಭಿಸಿ, ಇಂದು (೩೦.೦೯.೨೦೨೨) ಪ್ರಾಚಾರ್ಯರಾಗಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ೩೬ ವರ್ಷಗಳ ಸುದೀರ್ಘ ಸೇವೆಯನ್ನು ಮಹಾವಿದ್ಯಾಲಯಗಳಲ್ಲಿ ಮಾಡಿದ್ದಾರೆ.
ಡಾ. ಲಿಂಗರಾಜ ಅಂಗಡಿ ಉತ್ತಮ ಸಂಘಟಕರು, ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಹೋರಾಟ ಮಾಡಿ ಯು.ಜಿ.ಸಿ. ಸ್ಕೇಲ್ – ಅನುದಾನರಹಿತ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಲು ಮಾಡಿದ ಹೋರಾಟದಿಂದ ಬೆಳೆದರು.
ಕರ್ನಾಟಕ ವಿವಿ ವ್ಯಾಪ್ತಿ ಕಾಲೇಜ್‌ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಎರಡು ಸಲ ಸಂಘದ, ಅಧ್ಯಕ್ಷರಾಗಿ, ರಾಜ್ಯಮಟ್ಟದ ಒಕ್ಕೂಟದ ಅಧ್ಯಕ್ಷರಾಗಿ, ಅಖಿಲ ಭಾರತ ವಿಶ್ವವಿದ್ಯಾಲಯ ಹಾಗೂ ಕಾಲೇಜು ಸಂಘಗಳ ಒಕ್ಕೂಟದ ವಲಯ ಕಾರ್ಯದರ್ಶಿಯಾಗಿ ಒಳ್ಳೆಯ ಕೆಲಸ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಬೀಳ್ಕೊಡುಗೆ….ಪುಸ್ತಕ ಬಿಡುಗಡೆ

ಜಗದ್ಗುರು ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಿಬ್ಬಂದಿ ಕಲ್ಯಾಣ ವಿಭಾಗದಿಂದ ಸೆಪ್ಟೆಂಬರ್‌ ೩೦ರಂದು ಮಹಾವಿದ್ಯಾಲಯದ ಮೂಜಗಂ ಸಭಾಭವನದಲ್ಲಿ ಡಾ. ಲಿಂಗರಾಜ ಅಂಗಡಿಯವರ ಬೀಳ್ಕೊಡುಗೆ ಮತ್ತು “ಬುತ್ತಿ ಬಿಚ್ಚಿದಾಗ” ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಸಾನಿಧ್ಯವನ್ನು ಜಗದ್ಗುರು ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮಾಜಿ ಸಭಾಪತಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ವಿಧಾನ ಪರಿಷತ್‌ ಸದಸ್ಯರಾದ ಪ್ರೊ. ಎಸ್. ವಿ. ಸಂಕನೂರ, ಪಾಲಿಕೆ ಮಹಾಪೌರರಾದ ವೀರೇಶ ಅಂಚಟಗೇರಿ, ಮಾಜಿ ಲೋಕಸಭಾ ಸದಸ್ಯರಾದ ಪ್ರೊ. ಐ.ಜಿ. ಸನದಿ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಐ. ಮುನವಳ್ಳಿ , ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಬಿಳಿಗಿರಿ ಕೃಷ್ಣಮೂರ್ತಿ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ರಮೇಶ ಕೆ ಅತಿಥಿಗಳಾಗಿ ಆಗಮಿಸಲಿದ್ದು, ಸಾಹಿತಿಗಳಾದ ಡಾ. ಜಿ. ಎಂ. ನಾಗಯ್ಯ, ಪುಸ್ತಕ ಪರಿಚಯಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್‌ಜೆಎಂವಿ ಸಂಘದ ಕಾರ್ಯಾಧ್ಯಕ್ಷ ಮತ್ತು ಲೆಕ್ಕ ಪರಿಶೋಧಕ ಅರವಿಂದ ಕುಬಸದ ವಹಿಸಲಿದ್ದಾರೆ

ಕರ್ನಾಟಕ ವಿಶ್ವವಿದ್ಯಾಲಯದ ಸಿನೆಟ್, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿ ,ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಶುಲ್ಕ ಇತರ ಅನುಕೂಲತೆಗಳನ್ನು ಒದಗಿಸುವುದರ ಮೂಲಕ ವಿದ್ಯಾರ್ಥಿ ಬಳಗದಲ್ಲಿ ಪ್ರೀತಿಯ ಪ್ರಾಧ್ಯಾಪಕರಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾಗಿ ವಿಶ್ವವಿದ್ಯಾಲಯ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕನ್ನಡ ಸಾಹಿತ್ಯ ತಾಲೂಕು, ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ಕೋಶಾಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿ ೨೦೧೨ ರಿಂದ ಇಂದಿನವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಾಹಿತಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹ, ಬೆಂಬಲ ಕೊಡುತ್ತಾ ಬಂದಿದ್ದಾರೆ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನ ದತ್ತಿ ಉಪನ್ಯಾಸಗಳನ್ನು ನಿಯಮಿತವಾಗಿ ಅಯೋಜಿಸುತ್ತ ಬಂದಿದ್ದಾರೆ. ೨೦೧೮ ರಲ್ಲಿ ೮೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಭುತವಾಗಿ ಸಂಘಟಿಸಿ ಯಶಸ್ವಿಗೊಳಿಸಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಶಾಸಕರ, ಸಂಸದರ ಅನುದಾನವನ್ನು ಪಡೆದು ಧಾರವಾಡ ಕಸಾಪ ಸಭಾಭವನ ನಿರ್ಮಾಣ ಮಾಡಿದ್ದಲ್ಲದೆ, ಈಗ ಬಯಲು ರಂಗ ಮಂದಿರ ನಿರ್ಮಾಣದ ಯೋಜನೆಯನ್ನು ಹಾಕಿಕೊಂಡಿದ್ದಾರೆ. ದತ್ತಿಗಳ ಸಂಖ್ಯೆ ಹೆಚ್ಚಿಸಿದ್ದಾರೆ. ಕಸಾಪದ ಅಜೀವ ಸದಸ್ಯರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ.

ಕನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಾಲೇಜು ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ, ಸಾಹಿತಿಗಳಿಗೆ, ಸಾರ್ವಜನಿಕರಿಗೆ ಹೀಗೆ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದಾರೆ.
೧೯೮೯ ರಿಂದ ಇಲ್ಲಿರವರೆಗೆ ೪೦ಕ್ಕೂ ಹೆಚ್ಚಿನ ರಕ್ತದಾನ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಇಂಡಿಯನ್ ಎಕಾನಾಮಿಕ್ಸ್‌ ಅಸೋಸಿಯೇಶನ್, ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ಇಂಡಿಯನ್ ಸೊಸೈಟಿ ಆಫ್ ಲೇಬರ್ ಎಕಾನಾಮಿಕ್ಸ್‌, ಅನನ್ಯ ಸಾಹಿತ್ಯ ಕೂಟ ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ಸಾಹಿತ್ಯಿಕ, ಸಾಂಸ್ಕೃತಿಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಲವಾರು ಸಂಘ-ಸಂಸ್ಥೆಗಳು ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಿದೆ.
ಪ್ರಾಥಮಿಕ ಶಿಕ್ಷಕರಾಗಿದ್ದ ತಂದೆ ರುದ್ರಪ್ಪ, ತಾಯಿ ರೇಣವ್ವ ಮೂರುಸಾವಿರಮಠದ ಉಭಯ ಜಗದ್ಗುರುಗಳು, ಪತ್ನಿ ಸುಮಂಗಲಾ, ಕುಂದಗೋಳ ಕ್ಷೇತ್ರ ಶಾಸಕರಾಗಿದ್ದ ಮಾವ ಬಿ. ಎ. ಉಪ್ಪಿನ ಮತ್ತು ಪರಿವಾರದವರು, ವಿಧಾನ ಪರಿಷತ್ತಿನ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಸಹೋದರರಾದ ಮಹಾಂತೇಶ ಮತ್ತು ಉಮೇಶ, ಸಹೋದರಿ ಗಂಗವ್ವ, ಮಗಳು ಶ್ವೇತಾ, ಮಗ ಸುಚಿತ, ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಹೊದ್ಯೋಗಿಗಳು, ಕಸಾಪ ಸದಸ್ಯರು ಮುಂತಾದವರನ್ನು ಸದಾ ಸ್ಮರಿಸುತ್ತಾರೆ.
ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ಅವರು ರಚಿಸಿದ ‘ಬುತ್ತಿ ಬಿಚ್ಚಿದಾಗ’ ಆತ್ಮಕಥನ ಗ್ರಂಥ ಬಿಡುಗಡೆಯಾಗುತ್ತಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ಸಂಕಲ್ಪ ಮಾಡಿರುವ ಲಿಂಗರಾಜ ಅಂಗಡಿ ಅವರಿಗೆ ಅಭಿನಂದನೆಗಳು.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

 

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement