ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ(ಎಲ್‌ಒಪಿ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದಯಪುರ ಚಿಂತನ ಶಿಬಿರದಲ್ಲಿ ಕಾಂಗ್ರೆಸ್‌ನ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮಕ್ಕೆ ಅನುಗುಣವಾಗಿ ಮೇಲ್ಮನೆಯ ಸ್ಥಾನದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಸೋನಿಯಾ ಗಾಂಧಿ ಅವರಿಗೆ ಶುಕ್ರವಾರ ರಾತ್ರಿ ಪತ್ರ ಬರೆದಿದ್ದಾರೆ.
25 ವರ್ಷಗಳಲ್ಲಿ ಕಾಂಗ್ರೆಸ್ ತನ್ನ ಮೊದಲ ಗಾಂಧಿಯೇತರ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದು, 80 ವರ್ಷದ ಖರ್ಗೆ ಅವರು ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ ಮತ್ತು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅವರು ‘ಜಿ-23’ ಭಿನ್ನಮತೀಯ ಗುಂಪಿನ ಪ್ರಮುಖ ಸದಸ್ಯ ಶಶಿ ತರೂರ್ ಅವರನ್ನು ನೇರ ಸ್ಪರ್ಧೆಯಲ್ಲಿ ಎದುರಿಸುತ್ತಾರೆ. ಗಮನಾರ್ಹವಾಗಿ, ಹಲವಾರು ಜಿ-23 ನಾಯಕರು ಅಧಿಕೃತವಾಗಿ ಖರ್ಗೆ ಅವರನ್ನು ಬೆಂಬಲಿಸಿದ್ದಾರೆ. ಮೂರನೇ ಅಭ್ಯರ್ಥಿಯಾಗಿರುವ ಜಾರ್ಖಂಡ್‌ನ ಮಾಜಿ ಸಚಿವ ಕೆ.ಎನ್‌. ತ್ರಿಪಾಠಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ.

ತಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಗಾಂಧಿಗಳು ಆಂತರಿಕ ಚುನಾವಣೆಯಲ್ಲಿ ಮತ ಚಲಾಯಿಸದಿರಬಹುದು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಈಗ ಹೊಸ ನಾಯಕನನ್ನು ನೇಮಿಸುತ್ತಾರೆ ಮತ್ತು ನಿರ್ಧಾರವನ್ನು ರಾಜ್ಯಸಭಾ ಅಧ್ಯಕ್ಷರಿಗೆ ತಿಳಿಸುತ್ತಾರೆ.
ಒಬ್ಬ ನಾಯಕ ಒಂದು ಹುದ್ದೆ ಎಂಬ ಉದಯಪುರ ನಿರ್ಣಯದ ನಂತರ, ಖರ್ಗೆ ಅವರು ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ. ಪಿ. ಚಿದಂಬರಂ ಮತ್ತು ದಿಗ್ವಿಜಯ್ ಸಿಂಗ್ ಅವರು ಖರ್ಗೆ ಅವರ ಉತ್ತರಾಧಿಕಾರಿಯಾಗುವ ರೇಸ್‌ನಲ್ಲಿದ್ದಾರೆ.
ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಮತ್ತು ಕೆಎನ್ ತ್ರಿಪಾಠಿ ನಾಮಪತ್ರ ಸಲ್ಲಿಸಿದರು. ಆದರೆ, ಜಿ-23 ನಾಯಕರಾದ ಪೃಥ್ವಿರಾಜ್ ಚವ್ಹಾಣ, ಮನೀಶ್ ತಿವಾರಿ ಮತ್ತು ಭೂಪಿಂದರ್ ಹೂಡಾ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಏತನ್ಮಧ್ಯೆ, ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ದಿಗ್ವಿಜಯ ಸಿಂಗ್ ಅವರು ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಬದಲಿಗೆ ತಮ್ಮ ಹಿರಿಯ ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆಯನ್ನು ಪ್ರಸ್ತಾಪಿಸುವುದಾಗಿ ಘೋಷಿಸಿದರು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement