ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿಯ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನೀಡಿದ್ದಾರೆನ್ನಲಾದ ಪತ್ರವು ಸೋರಿಕೆಯಾಗಿದ್ದು, ರಾಜಸ್ತಾನದ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಇನ್ನೂ ಸರಿಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಹಾಗೂ ಈ ಪತ್ರ ಕಾಂಗ್ರೆಸ್‌ನಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಮಲಯಾಳಂ ಮನೋರಮಾ ಛಾಯಾಗ್ರಾಹಕ ಸುರೇಶ್ ಜಯಪ್ರಕಾಶ್ ಕ್ಲಿಕ್ಕಿಸಿದ ಫೋಟೋದಲ್ಲಿ ಈ ಪತ್ರದ ಟಿಪ್ಪಣಿ ಸೆರೆಹಿಡಿಯಲಾಗಿದ್ದು, ಶನಿವಾರ ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜಸ್ತಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಸೋನಿಯಾ ಗಾಂಧಿಯವರ ಬಳಿ ಕ್ಷಮೆಯಾಚಿಸಿ ಹೊರಗೆ ಬಂದಿರಬಹುದು, ಆದರೆ ಅವರು ಸೋನಿಯಾ ಅವರನ್ನು ಭೇಟಿಯಾಗಿದ್ದು ಮಾತ್ರ ಬೇರೆ ಉದ್ದೇಶಕ್ಕೆ ಎಂಬುದು ಈಗ ಜಗಜ್ಜಾಹೀರಾಗಿದೆ.
ಗುರುವಾರ ಸೋನಿಯಾ ಗಾಂಧಿಯವರೊಂದಿಗಿನ ಅಶೋಕ್ ಗೆಹ್ಲೋಟ್ ಅವರ ಸಭೆಯು ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ರೇಸ್‌ನಿಂದ ಹಿಂದೆ ಸರಿಯುವುದಕ್ಕೆ ಮತ್ತು ರಾಜಸ್ತಾನದ ಬಿಕ್ಕಟ್ಟಿನ ಬಗ್ಗೆ ಕ್ಷಮೆಯಾಚನೆಯೊಂದಿಗೆ ಮುಗಿಯಿತು ಎಂದು ಹೇಳಲಾಗಿತ್ತು. ಆದರೆ ಅವರು ಸಭೆಯಲ್ಲಿ ಸೋನಿಯಾ ಅವರಿಗೆ ನೀಡಬೇಕೆಂದು ಬರೆದಿದ್ದ ಟಿಪ್ಪಣಿಗಳು ಸಂಪೂರ್ಣವಾಗಿ ವಿಭಿನ್ನವಾದ ಚಿತ್ರಣವನ್ನೇ ನೀಡುತ್ತಿವೆ.
ಗೆಹ್ಲೋಟ್ ಅವರ ಪತ್ರದ ಟಿಪ್ಪಣಿಯು ಅವರ ಕಿರಿಯ ಪ್ರತಿಸ್ಪರ್ಧಿ ಸಚಿನ್ ಪೈಲಟ್ ವಿರುದ್ಧದ ಆರೋಪ ಪಟ್ಟಿಯನ್ನು ಬಹಿರಂಗಪಡಿಸುತ್ತದೆ. ‘ಎಸ್‌ಪಿ’ ಎಂದು ಬರೆದು ಸಚಿನ್ ಪೈಲಟ್ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ ಗೆಹ್ಲೋಟ್ ಅವರ ಟಿಪ್ಪಣಿಗಳಲ್ಲಿ ‘102 Vs SP’ ಎಂದು ಹೈಲೈಟ್ ಮಾಡಿದೆ. ಪಕ್ಷದಲ್ಲಿ ಅವರ ಕಟ್ಟಾ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರ ಕುರಿತು ಎಸ್‌ಪಿ ಎಂದು ಉಲ್ಲೇಖಿಸಲಾಗಿದೆ.
ಟಿಪ್ಪಣಿಯು ಪೈಲಟ್ ವಿರುದ್ಧ ಹಲವಾರು ಅಂಶಗಳನ್ನು ಒಳಗೊಂಡಿದೆ. ಗೆಹ್ಲೋಟ್ ಅವರು ತಾವು 102 ಶಾಸಕರ ಬೆಂಬಲವನ್ನು ಹೊಂದಿದ್ದು, ಪೈಲಟ್ ಕೇವಲ 18 ಶಾಸಕರ ಬೆಂಬಲ ಹೊಂದಿದ್ದಾರೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ. ‘ಗುಂಡಾಗರ್ದಿ (ಗೂಂಡಾಗಿರಿ) ಎಂದು ಉಲ್ಲೇಖಿಸಲಾಗಿದೆ ಬಹುಶಃ ಗೆಹ್ಲೋಟ್ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ನೇತೃತ್ವದ 2019 ರ ದಂಗೆಯನ್ನು ಅದು ಉಲ್ಲೇಖಿಸುತ್ತದೆ. ₹ 10 ರಿಂದ 50 ಕೋಟಿ ನೀಡುವ ಮೂಲಕ ಶಾಸಕರನ್ನು ಖರೀದಿಸಲು ಯತ್ನಿಸಿದ ಸಚಿನ್ ಪೈಲಟ್, ಬಿಜೆಪಿಯೊಂದಿಗೆ ಶಾಮೀಲಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಪತ್ರದ ಟಿಪ್ಪಣಿಯಲ್ಲಿ ಆರೋಪಿಸಿದ್ದಾರೆ.
ಫೋಟೋದಲ್ಲಿ ಸೆರೆ ಸಿಕ್ಕ ಟಿಪ್ಪಣಿ ಪ್ರಕಾರ, ಗೆಹ್ಲೋಟ್ ಅವರು ಸೋನಿಯಾ ಗಾಂಧಿಯವರಿಗೆ “ಜೋ ಹುವಾ ಬಹುತ್ ದುಖದ್ ಹೈ, ಮೈನ್ ಭೀ ಬಹುತ್ ಆಹತ್ ಹನ್ (ಏನು ಸಂಭವಿಸಿದೆ ಎಂಬುದು ತುಂಬಾ ದುಃಖಕರವಾಗಿದೆ, ನನಗೂ ತುಂಬಾ ನೋವಾಗಿದೆ)” – ಇದು ತಮ್ಮ ಪಾಳೆಯದಿಂದ ದಂಗೆ ಬಗೆಗಿನ ಸ್ಪಷ್ಟವಾದ ಉಲ್ಲೇಖವಾಗಿದೆ.
ರಾಜನೀತಿ ಮೇ ಹವಾ ಬದಲ್ತೇ ದೇಖ್, ಸಾಥ್-ಚೋಡ್ ದೇತೆ ಹೈಂ. ಯಹಾಂ ಐಸಾ ನಹೀಂ ಹುವಾ (ಬದಲಾದ ರಾಜಕೀಯ ಸನ್ನಿವೇಶವನ್ನು ನೋಡುತ್ತಾ ಪಕ್ಷಗಳನ್ನು ಬದಲಾಯಿಸುವ ಸಂಸ್ಕೃತಿ ಇದೆ. ಅದು ಇಲ್ಲಿ ಅದು ಆಗಲಿಲ್ಲ)…” ಅದು ಹೇಳಿದ್ದು ತಮ್ಮ ಪರವಾಗಿರುವ ಶಾಸಕರ ಸ್ಪಷ್ಟವಾದ ಸಮರ್ಥನೆಯಾಗಿದೆ.
“ಎಸ್‌ಪಿ ಪಕ್ಷವನ್ನು ತೊರೆಯುತ್ತಾರೆ – ವೀಕ್ಷಕ ಪೆಹಲೆ ಸಹಿ ರಿಪೋರ್ಟ್ ದೇತೆ ತೋ ಪಾರ್ಟಿ ಕೆ ಲಿಯೇ ಅಚ್ಚಾ ಹೋತಾ (ವೀಕ್ಷಕರು ಈ ಹಿಂದೆ ಸರಿಯಾದ ವರದಿ ನೀಡಿದ್ದರೆ, ಪಕ್ಷಕ್ಕೆ ಒಳ್ಳೆಯದಾಗುತ್ತಿತ್ತು)”, ಟಿಪ್ಪಣಿಗಳಲ್ಲಿ ಸಚಿನ್ ಪೈಲಟ್ ಅವರಿಗೆ “ಪೆಹ್ಲಾ” ಪ್ರದೇಶ್ ಅಧ್ಯಕ್ಷ್ ಜಿಸ್ನೆ ಸರ್ಕಾರ್ ಗಿರಾನೆ ಕಿ ಪೂರಿ ಕೋಶಿಶ್ ಕಿ (ಸರ್ಕಾರವನ್ನು ಉರುಳಿಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದ ಮೊದಲ ರಾಜ್ಯಾಧ್ಯಕ್ಷ )” ಎಂದು ಗೆಹ್ಲೋಟ್ ಪೈಲಟ್ ವಿರುದ್ಧ ಆರೋಪ ಮಾಡಿದ್ದಾರೆ.
ಈ ಪತ್ರದ ಟಿಪ್ಪಣಿಯು ರಾಜಸ್ಥಾನ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರ ನಡುವಿನ ಆಂತರಿಕ ಕಚ್ಚಾಟವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಇವರಿಬ್ಬರ ನಡುವಿನ ಎಂದೂ ಮುಗಿಯದ ಜಟಾಪಟಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಈ ಪತ್ರದ ಟಿಪ್ಪಣಿ ಬಗ್ಗೆ ಕಾಂಗ್ರೆಸ್ ಅಥವಾ ಅಶೋಕ್ ಗೆಹ್ಲೋಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗೆಹ್ಲೋಟ್ Vs ಪೈಲಟ್ 2.0
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರೇಸ್‌ನಿಂದ ಹೊರಗುಳಿದಿದ್ದಾರೆ ಮತ್ತು ರಾಜ್ಯದಲ್ಲಿ ಅವರ ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ಸಸ್ಪೆನ್ಸ್ ಹಾಗೆಯೇ ಉಳಿದುಕೊಂಡಿದೆ. ಆದರೆ ಪಕ್ಷವು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.
ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುವ ನಾಯಕರ ವಿರುದ್ಧ ಮತ್ತು ಪಕ್ಷದ ಇತರ ಪದಾಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮದ ಎಚ್ಚರಿಕೆಯನ್ನು ಪಕ್ಷವು ನೀಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ ಅವರೊಂದಿಗೆ ಸೋನಿಯಾ ಗಾಂಧಿ ಅವರ ಅರ್ಧ ಗಂಟೆಯ ಸಭೆಯ ನಂತರ ಗೆಹ್ಲೋಟ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಸ್ಥಾನದಲ್ಲಿ ಕೆಲವು ಶಾಸಕರು ಸಮಾನಾಂತರ ಸಭೆ ನಡೆಸಿ ಪಕ್ಷದ ಹೈಕಮಾಂಡ್‌ಗೆ ಕೆಲವು ಷರತ್ತುಗಳನ್ನು ವಿಧಿಸಿದ ಬೆಳವಣಿಗೆಗೆ ಕಾಂಗ್ರೆಸ್ ಮುಖ್ಯಸ್ಥರಲ್ಲಿ ಕ್ಷಮೆಯಾಚಿಸುವುದಾಗಿ ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ