ಸೆಪ್ಟೆಂಬರ್‌ ತಿಂಗಳಲ್ಲಿ ₹1.47 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: 26% ಏರಿಕೆ, ಕರ್ನಾಟಕದಲ್ಲೂ ಹೆಚ್ಚಳ

ನವದೆಹಲಿ: ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಒಟ್ಟು ಸಂಗ್ರಹ ಸೆಪ್ಟೆಂಬರ್‌ನಲ್ಲಿ 1,47,686 ಕೋಟಿ ರೂ.ಗಳಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 26ರಷ್ಟು ಹೆಚ್ಚಳವಾಗಿದೆ.
ಸರಕುಗಳ ಆಮದುಗಳಿಂದ ಬಂದಿರುವ ಆದಾಯವು ಶೇ. 39ರಷ್ಟು ಹೆಚ್ಚಾಗಿದ್ದರೆ, ದೇಶೀಯ ವಹಿವಾಟುಗಳು ಮತ್ತು ಸೇವೆಗಳ ಆಮದುಗಳಿಂದ ಬಂದ ಆದಾಯದಲ್ಲಿ ಶೇ. 22ರಷ್ಟು ಹೆಚ್ಚಳ ಕಂಡುಬಂದಿದೆ.
ಸೆಪ್ಟೆಂಬರ್‌ ತಿಂಗಳ ಜಿಎಸ್‌ಟಿ ಸಂಗ್ರಹದೊಂದಿಗೆ ಸತತ 7ನೇ ತಿಂಗಳೂ 1.4 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಪರೋಕ್ಷ ತೆರಿಗೆ ಸಂಗ್ರಹವಾಗಿದೆ. .
ಸೆಪ್ಟೆಂಬರ್‌ನಲ್ಲಿ ಕೇಂದ್ರೀಯ ಜಿಎಸ್‌ಟಿ ಸಂಗ್ರಹ ಕೇವಲ 25,271 ಕೋಟಿ ರೂ.ಗಳಾಗಿದ್ದರೆ, ರಾಜ್ಯ ಜಿಎಸ್‌ಟಿ ಒಳಹರಿವು 31,813 ಕೋಟಿ ರೂ. ಆಗಿದೆ. ಸಮಗ್ರ ಜಿಎಸ್‌ಟಿ ಅಥವಾ ಐಜಿಎಸ್‌ಟಿ 80,464 ಕೋಟಿ ರೂ. ಆಗಿದ್ದು ಇದರಲ್ಲಿ ಅರ್ಧದಷ್ಟು ಸರಕುಗಳ ಆಮದುಗಳಿಂದ ಬಂದಿದೆ. ಜಿಎಸ್‌ಟಿ ಪರಿಹಾರ ಸೆಸ್ ಸಂಗ್ರಹ 10,137 ಕೋಟಿ ರೂ.ಗಳಾಗಿದೆ. ಇದರಲ್ಲಿ ಸರಕುಗಳ ಆಮದುಗಳಿಂದ 856 ಕೋಟಿ ರೂ. ಸಂಗ್ರಹವಾಗಿದೆ.

ದೇಶೀಯ ವಹಿವಾಟುಗಳಿಂದ ಆದಾಯವು ಶೇ. 22ರಷ್ಟು ಹೆಚ್ಚಳವಾಗಿದ್ದರೂ ರಾಜ್ಯಗಳಿಂದ ರಾಜ್ಯಗಳಿಗೆ ವಹಿವಾಟಿನಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಬಿಹಾರದಲ್ಲಿ ಆದಾಯ ಶೇ. 67ರಷ್ಟು ಏರಿಕೆಯಾಗಿದ್ದರೆ, ಗೋವಾದಲ್ಲಿ ಶೇ. 35, ಹರಿಯಾಣದಲ್ಲಿ ಶೇ. 33, ದೆಹಲಿಯಲ್ಲಿ ಶೇ. 32 ಮತ್ತು ಮಹಾರಾಷ್ಟ್ರದಲ್ಲಿ ಶೇ. 29ರಷ್ಟು ಜಿಗಿತ ಕಂಡಿದೆ. ಕೇರಳ ಮತ್ತು ಪಶ್ಚಿಮ ಬಂಗಾಳ (ಶೇ. 27), ಕರ್ನಾಟಕ (ಶೇ. 25) ಮತ್ತು ಉತ್ತರ ಪ್ರದೇಶ (ಶೇ. 23) ಸಹ ರಾಷ್ಟ್ರೀಯ ಸರಾಸರಿಗಿಂತ ವೇಗವಾಗಿ ಬೆಳೆವಣಿಗೆ ದಾಖಲಿಸಿವೆ. ಆದರೆ ಆಂಧ್ರ ಪ್ರದೇಶ ಶೇ. 21, ಗುಜರಾತ್‌ನಲ್ಲಿ ಶೇ. 16, ಒಡಿಶಾ ಶೇ. 13 ಮತ್ತು ತಮಿಳುನಾಡು ಶೇ. 10ರ ಬೆಳವಣಿಗೆಯೊಂದಿಗೆ ಪಟ್ಟಿಯಲ್ಲಿ ಹಿಂದುಳಿದಿವೆ.
ಸೆಪ್ಟೆಂಬರ್‌ ತಿಂಗಳಿನಲ್ಲಿ ಒಂದೇ ದಿನ ಎರಡನೇ ಅತಿ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗಿದ್ದು, ಸೆಪ್ಟೆಂಬರ್ 20ರಂದು 49,453 ಕೋಟಿ ರೂ. ಸಂಗ್ರಹವಾಗಿದೆ. ಈ ದಿನ ಎರಡನೇ ಅತಿ ಹೆಚ್ಚಿನ 8.77 ಲಕ್ಷ ಚಲನ್‌ಗಳು ಸಲ್ಲಿಕೆಯಾಗಿವೆ. ಈ ಹಿಂದೆ 2022ರ ಜುಲೈ 20 ರಂದು 9.58 ಲಕ್ಷ ಚಲನ್‌ಗಳ ಮೂಲಕ 57,846 ಕೋಟಿ ಸಂಗ್ರಹವಾಗಿದ್ದು ಈ ಹಿಂದಿನ ದಾಖಲೆಯಾಗಿದೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement