ಬೀದರ: ಪುರಾತತ್ವ ಇಲಾಖೆ ಸಂರಕ್ಷಣೆಯಲ್ಲಿರುವ ನಗರದ ಪಾರಂಪರಿಕ ಕಟ್ಟಡ (ಮದರಸಾ)ದಲ್ಲಿ ಹಿಂದೂಗಳು ಪೂಜೆ ನಡೆಸಿ, ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಪೊಲೀಸರು 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹಮ್ಮದ್ ಗವಾನ್ ಯುನಿವರ್ಸಿಟಿ ಮುಂದೆ ಪೊಲೀಸ್ ಭದ್ರತೆ ನೀಡಲಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಭವಾನಿ ಮಾತೆಯ ಪಲ್ಲಕಿ ಉತ್ಸವದ ಮೆರವಣಿಗೆ ನಡೆಸುತ್ತಿದ್ದ ಗುಂಪು ಉತ್ಸವ ಸಾಗುವ ರಸ್ತೆಯ ಪಕ್ಕದಲ್ಲಿದ್ದ ಪಾರಂಪರಿಕ ಮೊಹಮ್ಮದ್ ಗವಾನ್ ಮದರಸಾವೊಂದಕ್ಕೆ ಹೋಗಿ ಅಲ್ಲಿ ದಸರಾ ಪೂಜೆ- ಪುನಸ್ಕಾರ ನೆರವೇರಿಸಿದ್ದು, ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮತಿ ಇಲ್ಲದೆ ನುಗ್ಗಿದ್ದನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಯಾರನ್ನೂ ಬಂಧಿಸದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರು ಪ್ರತಿಭಟನೆಗೆ ಮುಂದಾಗಿದ್ದರು. ನಂತರ ನಾಲ್ವರು ಆರೋಪಿಗಳ ಬಂಧನದ ನಂತರ ಪ್ರತಿಭಟನೆ ನಿರ್ಧಾರ ಹಿಂಪಡೆಯಲಾಯಿತು.
ದಸರಾ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 9 ಗಂಟೆ ವೇಳೆಯಲ್ಲಿ ಐತಿಹಾಸಿಕ ಬೀದರ್ ಕೋಟೆಯ ಒಳಗಿರುವ ಒಳಕೋಟೆ ಗ್ರಾಮಸ್ಥರು ಭವಾನಿ ದೇವಿಯ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ರಾತ್ರಿ 9 ಗಂಟೆ ಸುಮಾರಿಗೆ ಮದರಸಾ ಪ್ರವೇಶಿಸಿ ಪೂಜೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪಾರಂಪರಿಕ ಮೊಹಮ್ಮದ್ ಗವಾನ್ ಮದರಸಾವನ್ನು 1460ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು, ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ. ಅಲ್ಲದೆ, ರಾಷ್ಟ್ರೀಯ ಮಹತ್ವದ ಕಟ್ಟಡಗಳ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದೆ.
ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಬೀದರಿನಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಇಲ್ಲ. ದಸರಾ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಪಕ್ಕದಲ್ಲಿ ಇದ್ದ ಸ್ಮಾರಕದಲ್ಲಿ ಪೂಜೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.
ಬೀದರಿನಲ್ಲಿ ದಸರಾ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಬಳಿ ಇದ್ದ ರಾಷ್ಟ್ರೀಯ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಸ್ಮಾರಕದಲ್ಲಿದ್ದ ವೃಕ್ಷಕ್ಕೆ ಹಿಂದೆಯೂ ಪೂಜೆ ನಡೆಯುತ್ತಿತ್ತು. ಆದರೆ ಕೆಲವರಿಂದ ಮಾತ್ರ ನಡೆಯುತ್ತಿತ್ತು. ಆದರೆ, ಈ ಬಾರಿ ದಸರಾ ಮೆರವಣಿಗೆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಗಿದ್ದು,ಅದನ್ನು ವೀಡಿಯೋ ಮಾಡಿದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ಮಾಡಲಾಗಿದೆ. ಯಾರೂ ಅಲ್ಲಿ ನುಗ್ಗಿಲ್ಲ. ಆದರೆ ಪೂಜೆ ಸಲ್ಲಿಸಿದವರ ಸಂಖ್ಯೆ ಹೆಚ್ಚಿತ್ತು ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ