ಬೇರೆ ಧರ್ಮಕ್ಕೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆ..? : ಅಧ್ಯಯನಕ್ಕೆ ಆಯೋಗ ರಚಿಸಿದ ಕೇಂದ್ರ

ನವದೆಹಲಿ: ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದು ಆನಂತರದಲ್ಲಿ ಬೇರೆ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬಹುದೇ ಎಂಬುದನ್ನು ಪರಿಶೀಲಿಸಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕೆ ಜಿ ಬಾಲಕೃಷ್ಣನ್‌ ಅವರ ನೇತೃತ್ವದ ಮೂವರು ಸದಸ್ಯರ ಆಯೋಗವನ್ನು ಕೇಂದ್ರ ಸರ್ಕಾರವು ರಚಿಸಿದೆ.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ಕುರಿತು ಅಧಿಸೂಚನೆ ಹೊರಡಿಸಿದೆ. ನ್ಯಾ. ಬಾಲಕೃಷ್ಣನ್ ಅಧ್ಯಕ್ಷರಾಗಿರುವ ಆಯೋಗದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಡಾ. ರವೀಂದರ್‌ ಕುಮಾರ್‌ ಜೈನ್‌ ಹಾಗೂ ಪ್ರೊ. ಸುಷ್ಮಾ ಯಾದವ್‌ ಸದಸ್ಯರಾಗಿರಲಿದ್ದಾರೆ.
ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 (ಕಾಲಕಾಲಕ್ಕೆ ತಿದ್ದುಪಡಿ)ರ ಪ್ರಕಾರ, ಹಿಂದೂ ಧರ್ಮ ಅಥವಾ ಸಿಖ್ ಧರ್ಮ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ.

ಆದಾಗ್ಯೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಗುಂಪುಗಳು ತಮ್ಮ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಇದೇ ರೀತಿಯ ಸ್ಥಾನಮಾನ ನೀಡಬೇಕು ಆಗಾಗ್ಗೆ ಒತ್ತಾಯಿಸುತ್ತಿವೆ. ಅವರ ಬೇಡಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಆಯೋಗವು ಪ್ರಮುಖವಾಗಿ, ತಾವು ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದು ಆನಂತರದಲ್ಲಿ ಬೇರೆ ಧರ್ಮಕ್ಕೆ ಮತಾಂತರ ಹೊಂದಿದ ಕಾಲದಿಂದ ಕಾಲಕ್ಕೆ ಸಂವಿಧಾನದ 341ರ ಅಡಿ ರಾಷ್ಟ್ರಪತಿಯವರು ಪರಿಶಿಷ್ಟ ಜಾತಿಗಳ ಕುರಿತು ಹೊರಡಿಸುವ ಅದೇಶಗಳ ವ್ಯಾಪ್ತಿಗೆ ಒಳಪಡದ ಹೊಸ ವ್ಯಕ್ತಿಗಳಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬಹುದೇ ಎಂಬ ಬಗ್ಗೆ ಪರಿಶೀಲಿಸಲಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಅಲ್ಲದೆ ಅಂತಹ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಒಳಪಡಿಸಿದರೆ ಉಂಟಾಗಬಹುದಾದ ಸಂಭಾವ್ಯ ಪರಿಣಾಮಗಳ ಬಗ್ಗೆ ಗಮನಿಸಲಿದೆ. ಮುಂದುವರೆದು ಹೀಗೆ ಮತಾಂತರಗೊಂಡವರು ತಮ್ಮ ಆಚಾರ, ಪರಂಪರೆಗಳಲ್ಲಿ ಸಾಮಾಜಿಕ ಮತ್ತಿತರ ಸ್ಥಾನಮಾನಗಳಲ್ಲಿ ಹೊಂದುವ ಪರಿವರ್ತನೆಯನ್ನು, ಇದರಿಂದ ಪರಿಶಿಷ್ಟ ಜಾತಿಗೆ ಅವರನ್ನು ಸೇರಿಸುವ ಪ್ರಶ್ನೆಯ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ಈ ಸಮಿತಿ ಅಭ್ಯಸಿಸಲಿದೆ. ಅಷ್ಟೇ ಅಲ್ಲದೆ, ಈ ವಿಚಾರವಾಗಿ ಏಳಬಹುದಾದ ಇನ್ನೂ ಹಲವು ಪ್ರಶ್ನೆಗಳನ್ನು ಆಯೋಗವು ಪರಿಶೀಲಿಸಲಿದೆ.
ಅಲ್ಲದೆ, ಆಯೋಗವು ಕೇಂದ್ರದೊಂದಿಗೆ ಸಮಾಲೋಚಿಸಿ ಅದರ ಒಪ್ಪಿಗೆಯೊಂದಿಗೆ ಸೂಕ್ತವೆಂದು ಪರಿಗಣಿಸುವ ಯಾವುದೇ ಇತರ ಸಂಬಂಧಿತ ಪ್ರಶ್ನೆಗಳನ್ನು ಆಯೋಗವು ಪರಿಶೀಲಿಸುತ್ತದೆ.
ಕೆ.ಜಿ. ಬಾಲಕೃಷ್ಣನ್ ಅವರು ಸುಪ್ರೀಂ ಕೋರ್ಟ್‌ನ ಮೊದಲ ದಲಿತ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಅವರು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೂ ಆಗಿದ್ದರು.

ಅಧಿಸೂಚನೆಯಲ್ಲಿ, ಈ ವಿಷಯವು “ಮೂಲ ಮತ್ತು ಐತಿಹಾಸಿಕವಾಗಿ ಸಂಕೀರ್ಣವಾದ ಸಾಮಾಜಿಕ ಮತ್ತು ಸಾಂವಿಧಾನಿಕ ಪ್ರಶ್ನೆ” ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಒಂದು ನಿರ್ದಿಷ್ಟ ವಿಷಯವಾಗಿದೆ ಎಂದು ಸಚಿವಾಲಯ ಹೇಳಿದೆ.
ಆಯೋಗದ ಪ್ರಧಾನ ಕಚೇರಿಯು ನವದೆಹಲಿಯಲ್ಲಿರಲಿದ್ದು, ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳೊಳಗೆ ವರದಿಯನ್ನು ಸಲ್ಲಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement