ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತೃಣಮೂಲ ಶಾಸಕ ಅರೆಸ್ಟ್: ಮಾಜಿ ಸಚಿವರ ನಂತರ 2ನೇ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಪಾದಿತ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ರಾತ್ರಿ ವಿಚಾರಣೆ ನಡೆಸಿದ ನಂತರ ಇಂದು, ಮಂಗಳವಾರ ಮುಂಜಾನೆ ಬಂಧಿಸಿದೆ.
ಇವರು ಈ ಹಗರಣದಲ್ಲಿ ಬಂಧಿತರಾದ ಎರಡನೇ ತೃಣಮೂಲ ನಾಯಕರಾಗಿದ್ದಾರೆ. ಜುಲೈನಲ್ಲಿ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಆಸ್ತಿಗಳಿಂದ ನಗದು ರಾಶಿಯನ್ನು ವಶಪಡಿಸಿಕೊಂಡ ನಂತರ ಬಂಗಾಳದ ಮಾಜಿ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದ ಹಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಇ.ಡಿ., ವಜಾಗೊಂಡ ಸಚಿವರ ವಾಟ್ಸಾಪ್ ಚಾಟ್ ಹಿಸ್ಟರಿಯಲ್ಲಿ ಭಟ್ಟಾಚಾರ್ಯ ಲಂಚ ವಸೂಲಿಯಲ್ಲಿ ತೊಡಗಿರುವ ಕುರಿತು ಸಂಭಾಷಣೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಪಲಾಶಿಪಾರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಮುಂದಿನ ಆದೇಶದವರೆಗೆ ಪ್ರಕರಣದಲ್ಲಿ ಅವರಿಗೆ ನೀಡಲಾದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದ ಕೆಲವೇ ವಾರಗಳ ನಂತರ ಭಟ್ಟಾಚಾರ್ಯ ಅವರ ಬಂಧನವಾಗಿದೆ. ಸೆ.30ರಂದು ಆದೇಶ ಹೊರಡಿಸಿದ್ದ ನ್ಯಾಯಾಲಯ ತನಿಖಾ ಸಂಸ್ಥೆಗೆ ಸಹಕರಿಸುವಂತೆ ಸೂಚಿಸಿತ್ತು.
ಅರ್ಪಿತಾ ಮುಖರ್ಜಿಯವರ ಮನೆಯಿಂದ ಇ.ಡಿ. ಕೋಟಿಗಟ್ಟಲೆ ಹಣ ಪತ್ತೆ ಮಾಡಿದ ಬಳಿಕ ಸಚಿವ ಪಾರ್ಥ ಚಟರ್ಜಿಯನ್ನು ಬಂಧಿಸಿದ ನಂತರ ತನಿಖೆಯಲ್ಲಿ ಮಾಣಿಕ್ ಭಟ್ಟಾಚಾರ್ಯ ಅವರ ಹೆಸರು ಕೇಳಿಬಂದ ನಂತರ ಅವರನ್ನು ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ಶಿಫಾರಸಿನ ಮೇರೆಗೆ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರು ಕ್ರಿಮಿನಲ್ ಪಿತೂರಿಯಲ್ಲಿ ಅಕ್ರಮವಾಗಿ ಬೋಧಕ ಹುದ್ದೆಗಳನ್ನು ನೀಡುವ ಮೂಲಕ ಹಣವನ್ನು ಲಾಂಡರಿಂಗ್ ಮಾಡಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ ಈ ಅಕ್ರಮಗಳು ನಡೆದಿದ್ದವು.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement