ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಮೊದಲ ಪ್ರಕರಣ ದಾಖಲು

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿ ನಂತರ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ.
ಕರ್ನಾಟಕ ಮತಾಂತರ ನಿಷೇಧ ಕಾಯ್ದೆಯಡಿ ಯಶವಂತಪುರದ ಬಿ.ಕೆ. ನಗರ ನಿವಾಸಿ ಸೈಯದ್ ಮೊಹಿನ್ (23) ಎಂಬ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮೂಲದ 19 ವರ್ಷದ ಯುವತಿಯನ್ನು ಕರೆದೊಯ್ದು ಮೊಹಿನ್ ಆಂಧ್ರಪ್ರದೇಶದಲ್ಲಿ ಮತಾಂತರ ಮಾಡಿದ್ದ ಎಂಬ ದೂರಿನ ಹಿನ್ನೆಲೆಯಲ್ಲಿ ಈಗ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಈ ಯುವತಿ ಆತನಿಗೆ ಹೇಗೆ ಪರಿಚಯವಾದರು ಹಾಗೂ ಈ ಪ್ರಕರಣದಲ್ಲಿ ಇನ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಯುವತಿಯ ಕುಟುಂಬದವರು ಮೂಲತಃ ಉತ್ತರ ಪ್ರದೇಶದ ಗೋರಖ್‌ಪುರ ಮೂಲದವರು. ಯುವತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರು ಸಹೋದರಿಯರು ಓರ್ವ ಸಹೋದರನ ಜೊತೆ ಕುಟುಂಬ ಯಶವಂತಪುರದ ಬಿ.ಕೆ.ನಗರದಲ್ಲಿ 15 ವರ್ಷಗಳಿಂದ ವಾಸವಿದ್ದಾರೆ.

ಕಳೆದ ಅಕ್ಟೋಬರ್‌ 5ರಂದುಅಂಗಡಿಗೆ ಹೋಗಿಬರುವುದಾಗಿ ಹೋಗಿದ್ದ ಯುವತಿ ಮನೆಗೆ ಹಿಂದಿರುಗಿರಲಿಲ್ಲ. ಈ ಸಂಬಂಧ ಕುಟುಂಬದ ಸದಸ್ಯರು ಯಶವಂತಪುರ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ವಾರದ ಬಳಿಕ ಬುರ್ಖಾ ಧರಿಸಿ ಯುವತಿಯು ಠಾಣೆಗೆ ಬಂದಿದ್ದಳು.
ಯುವತಿ ಮತಾಂತರಗೊಂಡಿದ್ದು, ಆಕೆಯನ್ನು ಮದುವೆಯಾಗುವುದಾಗಿ ಮೊಯಿನ್‌ ಎಂಬಾತ ಠಾಣೆಗೆ ಕರೆತಂದಿದ್ದ. ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರಿಂದ ಯಶವಂತಪುರ ಠಾಣೆಯಲ್ಲಿ ಮೊಯಿನ್ ವಿರುದ್ಧ ಮತಾಂತರ ಮಾಡಿರುವ ಆರೋಪ ಹೊರಿಸಿ ಮತ್ತೊಂದು ದೂರು ದಾಖಲಿಸಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಯುವತಿಯ ಮನೆಯ ಪಕ್ಕದ ಪ್ರದೇಶದಲ್ಲಿ ವಾಸಿಸುತ್ತಿರುವ ಮೊಯಿನ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಮೊಯಿನ್ ಯುವತಿಯ ಮೇಲೆ ಒತ್ತಡ ಒತ್ತಡ ಹೇರಿ ಕಾನೂನು ಬಾಹಿರವಾಗಿ ಮಸೀದಿಯೊಂದರಲ್ಲಿ ಮತಾಂತರ ಮಾಡಲಾಗಿದೆ ಎಂದು ಯುವತಿಯ ಪೋಷಕರು ಹೇಳಿದ್ದು, ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಮತಾಂತರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಮತಾಂತರ ನಿಷೇಧ ಕಾಯ್ದೆಯ ಅನ್ವಯ ಮತಾಂತರವಾಗುವ ವ್ಯಕ್ತಿ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಜಿಲ್ಲಾಧಿಕಾರಿ ಆ ವ್ಯಕ್ತಿಯ ಪೋಷಕರು / ಆಪ್ತರ ಹೇಳಿಕೆ ಪಡೆದು 30 ದಿನಗಳ ಗಡುವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಮತಾಂತರವಾಗುತ್ತಿದ್ದರೆ ಮಾತ್ರ ಜಿಲ್ಲಾಧಿಕಾರಿ ಅನುಮತಿ ನೀಡುತ್ತಾರೆ. ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಮತಾಂತರಕ್ಕೆ ಸಹಾಯ ಮಾಡುವ ಎಲ್ಲಾ ವ್ಯಕ್ತಿಗಳ ಮೇಲೆ ಕೂಡ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement