ಆಟೋರಿಕ್ಷಾ ಸೇವೆ: ಸರ್ಕಾರ ನಿಗದಿಪಡಿಸಿದ ದರದ ಜೊತೆಗೆ ಶೇ. 10 ದರ ವಿಧಿಸಲು ಓಲಾ, ಉಬರ್‌ಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಆಟೋರಿಕ್ಷಾ ಸೇವೆಗಳಿಗೆ 2021ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ದರದ ಜೊತೆಗೆ ಹೆಚ್ಚುವರಿಯಾಗಿ ಶೇ. 10ರಷ್ಟು ದರ ಮತ್ತು ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ವಿಧಿಸುವ ಮೂಲಕ ಆ್ಯಪ್‌ ಆಧರಿತ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಮುಂದುವರಿಸಬಹುದು ಎಂದು ಹೈಕೋರ್ಟ್‌ ಶುಕ್ರವಾರ ಆದೇಶ ಮಾಡಿದೆ.
ಓಲಾ ಮತ್ತು ಉಬರ್‌ ಇನ್ನು ಮುಂದೆ ತಮ್ಮ ಆ್ಯಪ್‌ ಮೂಲಕ ಆಟೋರಿಕ್ಷಾ ಸೇವೆ ನೀಡುವಂತಿಲ್ಲ. ತಕ್ಷಣ ಈ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಈಚೆಗೆ ನಿರ್ದೇಶಿಸಿರುವ ಆದೇಶ ವಜಾ ಮಾಡುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಉಬರ್‌ ಇಂಡಿಯಾ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಸಾರ್ವಜನಿಕರೂ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಯೋಗ್ಯ ಅವಕಾಶ ಕಲ್ಪಿಸಿ, 10-15 ದಿನಗಳಲ್ಲಿ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಗಳಿಗೆ ನ್ಯಾಯಯುತ ದರ ವಿಧಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ವಾದವನ್ನು ಆಲಿಸಿ ಪೀಠವು ಈ ಆದೇಶ ಮಾಡಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ನ್ಯಾಯಯುತ ದರ ಕುರಿತು ರಾಜ್ಯ ಸರ್ಕಾರವು ಸ್ಪಷ್ಟ ನಿಲುವು ತಳೆಯುವ ವರೆಗೆ ಅರ್ಜಿದಾರ ಕಂಪನಿಗಳ ವಿರುದ್ಧ ದುರುದ್ದೇಶಪೂರಿತ ಕ್ರಮ ಕೈಗೊಳ್ಳುವಂತಿಲ್ಲ. ಕಾನೂನಿನ ಅನ್ವಯ ಅರ್ಜಿದಾರ ಕಂಪನಿಗಳು ತಮ್ಮ ಪರವಾನಗಿ ನವೀಕರಣ ಮಾಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರ ಪರವಾಗಿ ಕಾಯ್ದಿರಿಸಲಾಗಿದೆ” ಎಂದು ಪೀಠ ಆದೇಶ ಮಾಡಿ, ಮುಂದಿನ ವಿಚಾರಣೆಯನ್ನು ನವೆಂಬರ್‌ 7ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement