ಕ್ರೀಯಾಶೀಲ ಪ್ರಾಧ್ಯಾಪಕ ಶಿವಪುತ್ರಪ್ಪ ಆಶಿ, ನಾಳೆ ‘ವರ್ತುಲ’ ಕವನ ಸಂಕಲನ ಲೋಕಾರ್ಪಣೆ

ಕ್ರೀಯಾಶೀಲ ವ್ಯಕ್ತಿತ್ವದ ೭೦ ವಯಸ್ಸಿನ (ಜನನ ೦೧.೧೦.೧೯೫೩) ಶಿವಪುತ್ರಪ್ಪ ರಂಗಪ್ಪ ಆಶಿ ಅವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆಶಿ ಸರ್ ಎಂದೇ ಚಿರಪರಿಚಿತರು. ಬಾಗಲಕೋಟಿ ಜಿಲ್ಲೆಯ ಬದಾಮಿ ತಾಲೂಕಿನ ಕೆಲವಡಿ ಗ್ರಾಮದವರಾದ ಅವರು ಕೆಲವಡಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಶಿವಯೋಗ ಮಂದಿರದಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ನರೇಗಲ್ಲದ ಅನ್ನದಾನೇಶ್ವರ ಮಹಾವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್‌ ಪದವಿಯನ್ನು ೧೯೭೬ರಲ್ಲಿ ಪಡೆದಿದ್ದಾರೆ.
ಸಿಂದಗಿಯ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೧೯೭೯ ರಲ್ಲಿ ಇಂಗ್ಲಿಷ್‌ ಉಪನ್ಯಾಸಕ ಸೇವೆ ಆರಂಭಿಸಿದದ ಅವರು ೧೯೮೫ ರಲ್ಲಿ ಚಿಕ್ಕಮಗಳೂರ ಜಿಲ್ಲೆಯ ತರೀಕೇರಿಯ ಸರ್ಕಾರಿ ಪದಿಪೂರ್ವ ಮಹಾವಿದ್ಯಾಲಯದಲ್ಲಿ ಸೇವೆ ಆರಂಭಿಸಿ, ಧಾರವಾಡ, ಬಳ್ಳಾರಿ, ದಾವಣಗೆರೆ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ, ಬ್ಯಾಹಟ್ಟಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯರಾಗಿ ೨೦೧೩ ರಲ್ಲಿ ಸೇವಾ ನಿವೃತ್ತಿ ಹೊಂದಿದರು. ನೂಲ್ವಿಯ ಸಿ.ಬಿ.ಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳ ಮತ್ತು ಗ್ರಾಮೀಣ ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ.

ವಿದ್ಯಾರ್ಥಿಯಿದ್ದಾಗಲೇ ಬರವಣಿಗೆ ರೂಢಿಸಿಕೊಂಡಿರುವ ಆಶಿ ಅವರು ಬರೆದ ಕವಿತೆಗಳು, ಲೇಖನಗಳು, ವಿಮರ್ಶೆಗಳು ನಾಡಿನ ಹಲವಾರು ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ಬೇರೆ, ಬೇರೆ ಪ್ರದೇಶಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಅವರ ಹಲವಾರು ಚಿಂತನಗಳು ಆಕಾಶವಾಣಿಯಲ್ಲಿ ಪ್ರಕಟವಾಗಿವೆ.

(ರಾಜ ವಿನಯ ಪ್ರಕಾಶನ, ಅಕ್ಷರ ಸಾಹಿತ್ಯ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ನಗರ ಘಟಕ ಸಹಯೋಗದಲ್ಲಿ ನಿವೃತ್ತ ಪದವಿ ಪೂರ್ವ ಪ್ರಾಚಾರ್ಯರಾದ ಶಿವಪುತ್ರಪ್ಪ ಆರ್. ಆಶಿ ಅವರ ‘ವರ್ತುಲ’ ಕವನ ಸಂಕಲನ ರವಿವಾರ ದಿನಾಂಕ ೧೬ ರಂದು ಮುಂಜಾನೆ ೧೧.೦೦ ಗಂಟೆಗೆ ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಅಧ್ಯಕ್ಷತೆಯನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪ್ರೊ. ಕೆ.ಎಸ್.ಕೌಜಲಗಿ ವಹಿಸಲಿದ್ದು, ಸಾಹಿತಿಗಳಾದ ಪ್ರೊ. ಬಿ.ಆರ್.ಪೊಲೀಸಪಾಟೀಲ ಮತ್ತು ಕವಿಗಳಾದ ಸತೀಶ ಕುಲಕರ್ಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪತ್ರಕರ್ತರಾದ ಸುಶಿಲೇಂದ್ರ ಕುಂದರಗಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ..ಅಲ್ಲದೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತರಾದ ಧಾರವಾಡ ಆಕಾಶವಾಣಿ ನಿರ್ದೇಶಕರಾದ ಡಾ ಬಸು ಬೇವಿನಗಿಡದ, ಪ್ರಾಚಾರ್ಯ ಹುದ್ದೆಯಿಂದ ನಿವೃತ್ತರಾದ ಡಾ.ಲಿಂಗರಾಜ ಆರ್.ಅಂಗಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತ ಹುಬ್ಬಳ್ಳಿ ನಗರ ಘಟಕದ ಅದ್ಯಕ್ಷರಾದ ಗುರುಸಿದ್ದಪ್ಪ ಎಮ್.ಬಡಿಗೇರ ಅವರನ್ನು ಸನ್ಮಾನಿಸಲಾಗುತ್ತದೆ.)

ಸೌಮ್ಯ ಸ್ವಭಾವದ, ಹಿತಮಿತವಾಗಿ ಮಾತನಾಡುವ ಆಶಿ ಅವರ ಪ್ರಥಮ ಕವನ ಸಂಕಲನ “ ಮನಕ್ಕೆ ನೆನಹಾಗಿ” ೨೦೧೬ ರಲ್ಲಿ ಪ್ರಕಟವಾಗಿದೆ.. ೪೧ ಕವನಗಳ ಈ ಸಂಕಲನ ಜಾತಿಯತೆ, ಭ್ರಷ್ಟಾಚಾರ, ಅತಿವೃಷ್ಟಿ, ಅನಾವೃಷ್ಟಿ, ಬರ ಮುಂತಾದ ವಿಷಯಗಳನ್ನು ಒಳಗೊಂಡಿದೆ. ೩೭ ಕವಿತೆಗಳ ‘ವರ್ತುಲ’ ಈಗ ಲೋಕಾರ್ಪಣೆಗೊಳ್ಳುತ್ತಿದೆ. ದೈನಂದಿನ ಜೀವನಾನುಭವದ ವಿಶಿಷ್ಟ ವಿಷಯಗಳ ಕವಿತೆಗಳನ್ನು ರಚಿಸಿ ಕಾವ್ಯ ಪರಂಪರೆಗೆ ಹೊಸತನ ನೀಡುತ್ತಿದ್ದಾರೆ.

ನಾಡೋಜ ಡಾ.ಚನ್ನವೀರ ಕಣವಿ, ಡಾ. ಪ್ರಲ್ಹಾದ ಅಗಸನಕಟ್ಟೆ, ಪ್ರೊ.ಜಿ.ಬಿ.ವೀರಭದ್ರಯ್ಯನವರ, ಎಂ.ಡಿ ಗೋಗೇರಿ, ಸತೀಶ ಕುಲಕರ್ಣಿ, ಪ್ರೊ.ಸಿ.ಡಿ.ಹುಬ್ಬಳ್ಳಿ, ಪ್ರೊ. ಆರ್.ಎಸ್.ಪುರಾಣಿಕಮಠ, ಪ್ರೊ.ಕೆ.ಎ.ದೊಡ್ಡಮನಿ, ಪ್ರೊ.ಶಂಕರಗೌಡ ಸಾತ್ಮಾರ ಮುಂತಾದವರು ವ್ಯಾಪಕವಾದ ಅಧ್ಯಯನಶೀಲರಾದ ಆಶಿ ಅವರ ಕಾವ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಶಿ ಅವರಿಗೆ ಜಿಲ್ಲಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಸಂದಿದೆ. ಅಲ್ಲದೇ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ತಾಲೂಕು ಮತ್ತು ಜಿಲ್ಲಾ ಕವಿಗೋಷ್ಠಿಗಳಲ್ಲಿ ಕಾವ್ಯ ವಾಚನ ಮಾಡಿದ್ದಾರೆ. ಉದಯನ್ಮೋಖ ಕವಿಗಳಿಗೆ, ಬರಹಗಾರರಿಗೆ ಮಾರ್ಗದರ್ಶನ ಮಾಡಿ, ಉತ್ತೇಜನ ನೀಡುತ್ತಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹುಬ್ಬಳ್ಳಿ ತಾಲೂಕು ಘಟಕದ ಕಾರ‍್ಯದರ್ಶಿಯಾಗಿ ಅನೇಕ ಕಾರ‍್ಯಕ್ರಮಗಳನ್ನು ಅಯೋಜಿಸುತ್ತಿದ್ದಾರೆ.
-ಡಾ.ಬಿ.ಎಸ್.ಮಾಳವಾಡ, ನಿವೃತ್ತ ಗ್ರಂಥಪಾಲಕರು

 

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement