ಚಿತ್ರದುರ್ಗ ಮುರುಘಾಮಠಕ್ಕೆ ನೂತನ ಶ್ರೀಗಳ ನೇಮಕ: ಕಾನೂನು ಚೌಕಟ್ಟಿನಲ್ಲಿಯೇ ಕ್ರಮ

ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠಕ್ಕೆ ಹೊಸ ಶ್ರೀಗಳನ್ನು ನೇಮಕ ವಿಚಾರದಲ್ಲಿ ಕಾನೂನಿನಂತೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮಠದ ಟ್ರಸ್ಟ್ ಇದೆ. ಏನೇ ಕ್ರಮ ತೆಗೆದುಕೊಂಡರೂ ಕಾನೂನಿನ ಚೌಕಟ್ಟಿನಲ್ಲೇ ಆಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮಠದ ಭಕ್ತರ ನಿಯೋಗ ನನ್ನನ್ನು ಭೇಟಿ ಮಾಡಿದೆ. ಮಠದ ಸಂಪೂರ್ಣ ವಿಚಾರಗಳನ್ನು ತಿಳಿಸಿದೆ ಹಾಗೂ ನೂತನ ಶ್ರೀಗಳ ನೇಮಕ ವಿಚಾರದ ಬಗ್ಗೆಯೂ ಈ ನಿಯೋಗ ಪ್ರಸ್ತಾಪಿಸಿದೆ. ಮಠದಲ್ಲಿ ಕಾನೂನು ಪ್ರಕಾರ ಒಂದು ಟ್ರಸ್ಟ್ ಇದೆ. ಹಾಗಾಗಿ, ಕಾನೂನು ಪ್ರಕಾರವೇ ಎಲ್ಲವನ್ನೂ ಚರ್ಚೆ ಮಾಡಬೇಕಾಗುತ್ತದೆ ಎಂದರು.

ನಿಯೋಗ ಭೇಟಿ..
ಪೋಕ್ಸೊ ಕಾಯ್ದೆಯಡಿ ಮುರುಘಾ ಶ್ರೀಗಳು ಜೈಲಿನಲ್ಲಿದ್ದು, ಮಠಕ್ಕೆ ನೂತನ ಶ್ರೀಗಳನ್ನು ನೇಮಕ ಮಾಡಬೇಕು ಎಂದು ಮಠದ ಭಕ್ತರ ನಿಯೋಗ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಭೇಟಿ ಮಾಡಿತ್ತು. ಮುಖ್ಯಮಂತ್ರಿಗಳ ಭೇಟಿಗೂ ಮೊದಲು ನಿಯೋಗದ ಮುಖಂಡರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನೂ ಭೇಟಿ ಮಾಡಿದ್ದರು. ನಿಯೋಗದಲ್ಲಿ ಮಾಜಿ ಸಚಿವ ಏಕಾಂತಯ್ಯ, ವಿಧಾನ ಪರಿಷತ್ ಸದಸ್ಯ ನವೀನ್, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಟಿ ಮಲ್ಲಿಕಾರ್ಜುನಸ್ವಾಮಿ, ಮೊದಲಾದವರಿದ್ದರು ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement