ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ದಲ್ಲಿ ಉಗ್ರರು ಕೈಬಾಂಬ್ (ಗ್ರೆನೇಡ್) ಎಸೆದಿದ್ದರಿಂದ ಇಬ್ಬರು ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ.
ಮೃತರು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಯೋತ್ಪಾದಕರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಕೆಲವೇ ದಿನಗಳ ನಂತರ ಈ ಆಘಾತಕಾರಿ ಘಟನೆ ನಡೆದಿದೆ. ಶೋಪಿಯಾನ್ನ ಹಾರ್ಮೆನ್ ಎಂಬಲ್ಲಿ ಭಯೋತ್ಪಾದಕರು ಕೈಬಾಂಬ್ ಎಸೆದಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಉತ್ತರ ಪ್ರದೇಶದ ಕನೌಜ್ ನಿವಾಸಿಗಳಾದ ಮೊನೀಶಕುಮಾರ್ ಮತ್ತು ರಾಮಸಾಗರ್ ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎಂದು ಕಾಶ್ಮೀರದ ಪೊಲೀಸರು ಮಂಗಳವಾರ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್ ಮಾಡಿರುವ ಜಮ್ಮು ಕಾಶ್ಮೀರ ಪೊಲೀಸರು, ಗ್ರೆನೇಡ್ ಎಸೆದ ಇಮ್ರಾನ್ ಬಶೀರ್ ಗನಿ ಎಂಬಾತನನ್ನು ಶೋಪಿಯಾನ್ ಪೊಲೀಸರು ಬಂಧಿಸಿದ್ದಾರೆ. ಈತ ನಿಷೇಧಿತ ಲಷ್ಕರ್ ಎ ತಯ್ಯಬಾ ಸಂಘಟನೆಗೆ ಸೇರಿದ್ದು, ತನಿಖೆ ಮುಂದುವರಿದಿದೆ’ ಎಂದು ಹೇಳಿದ್ದಾರೆ. ಬಾಂಬ್ ಸ್ಫೋಟಗೊಂಡಾಗ ಈ ಕಾರ್ಮಿಕರು ನಿದ್ರಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಈ ಜಿಲ್ಲೆಯ ಚೌಧರಿ ಗುಂಡ್ ಎಂಬಲ್ಲಿ ಇರುವ ತನ್ನ ಮನೆಯ ಸಮೀಪದಲ್ಲೇ ಪೂರನ್ ಕೃಷ್ಣ ಭಟ್ ಎಂಬ ಕಾಶ್ಮೀರಿ ಪಂಡಿತನ ಮೇಲೆ ಅಕ್ಟೋಬರ್ 15ರಂದು ಗುಂಡಿನ ದಾಳಿ ನಡೆದಿತ್ತು. ಶೋಪಿಯಾನ್ನಲ್ಲಿ ವಾಸವಾಗಿದ್ದ ಅವರು ಕಾಶ್ಮೀರದಿಂದ ಹೊರಗೆ ಹೋದವರಲ್ಲ ಎಂದು ಸ್ಥಳೀಯರು ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ