ಬೆಂಗಳೂರು : ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ಕೊಟ್ಟ ತಕ್ಷಣವೇ ದೆಹಲಿಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಸೇರಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ದೆಹಲಿಗೆ ಹೋಗಬೇಕೆಂದಿದ್ದೇನೆ. ವರಿಷ್ಠರು ಸಮಯ ನೀಡಿದರೆ ತಕ್ಷಣವೇ ಹೋಗುತ್ತೇನೆ ಎಂದು ತಿಳಿಸಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಯಾವುದೇ ಎಚ್ಚರಿಕೆ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಪ್ರಸ್ತಾವನೆ ಸಲ್ಲಿಸಲು ನನ್ನನ್ನು ಭೇಟಿ ಮಾಡಿದ್ದರು. ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾಮಗಾರಿಗಳ ಬಗ್ಗೆ ಸಮಾಲೋಚಿಸಿದರು ಎಂದು ಉತ್ತರಿಸಿದರು.
ಒಕ್ಕಲಿಗ ಸಮುದಾಯಕ್ಕೆ ಶೇ 12ರಷ್ಟು ಮೀಸಲಾತಿ ನೀಡುವಂತೆ ನಿರ್ಮಲಾನಂದನಾಥ ಶ್ರೀಗಳು ಬೇಡಿಕೆ ಇಟ್ಟಿರುವ ಬಗ್ಗೆ ಮಾತನಾಡಿದ ಅವರು, ಯಾವುದೇ ಸಮುದಾಯ ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಅದಕ್ಕೆ ಕಾನೂನು ಚೌಕಟ್ಟಿದೆ. ಬೇರೆ ಬೇರೆ ತೀರ್ಪುಗಳಿವೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇದೆ. ಅವುಗಳ ಆಧಾರದಲ್ಲಿ ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿರುವೆ. ಈ ವರದಿ ಬಂದ ನಂತರ ತಪ್ಪಿತಸ್ಥರು ಯಾರೇ ಇರಲಿ ಕ್ರಮಕೈಗೊಳ್ಳಲಾಗುವುದು. ವಿಷಯ ತಿಳಿದ ತಕ್ಷಣ ಬಿಬಿಎಂಪಿ ಆಯಕ್ತರಿಗೆ ಮಾತನಾಡಿದ್ದೇನೆ ಹಾಗೂ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಳು ಸೂಚಿಸಿದ್ದೇನೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ