ಶಾಲೆಗಳಿಗೆ ₹100 ದೇಣಿಗೆ ಸುತ್ತೋಲೆ: ನನ್ನ, ಸಿಎಂ ಪಾತ್ರವಿಲ್ಲ ಎಂದ ಶಿಕ್ಷಣ ಸಚಿವ ಬಿ.ಸಿ ನಾಗೇಶ

ಮೈಸೂರು: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ ಖರ್ಚು-ವೆಚ್ಚಗಳಿಗಾಗಿ ಪೋಷಕರಿಂದ ದೇಣಿಗೆಯಾಗಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಎಸ್‌ಡಿಎಂಸಿಗಳಿಗೆ ಅನುಮತಿ ನೀಡಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದರಲ್ಲಿ ನನ್ನದಾಗಲಿ ಅಥವಾ ಮುಖ್ಯಮಂತ್ರಿಯದ್ದಾಗಲಿ ಯಾವುದೇ ಪಾತ್ರವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಸ್ಪಷ್ಟಪಡಿಸಿದ್ದಾರೆ.
ಹೀಗೆ ದೇಣಿಗೆ ಸಂಗ್ರಹಿಸಲು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಅವಕಾಶವಿದೆ. ಅದನ್ನು ಬಳಸಿ, ಎಸ್‌ಡಿಎಂಸಿಗಳ ಮನವಿ ಮೇರೆಗೆ ಅನುಮತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಸುತ್ತೋಲೆಗಳನ್ನು ಹೊರಡಿಸುವುದಕ್ಕೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಅಧಿಕಾರವಿದೆ. ಎಲ್ಲವನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಎಂದು ಇಲ್ಲ. ಕೆಲವರು, ಸುತ್ತೋಲೆಯನ್ನು ಸರಿಯಾಗಿ ಓದದೇ ಪ್ರತಿಕ್ರಿಯಿಸಿದ್ದಾರೆ. ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‌ಟಿಇಯಡಿ ಅವಕಾಶ ಕಲ್ಪಿಸಲಾಗಿದೆ. ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಿದವರು ಅಲ್ಲಿ ಪಾಠ ಮಾಡುವವರಿಗೆ ಸಂಭಾವನೆಗೆ ವ್ಯವಸ್ಥೆ ಮಾಡಿಲ್ಲ. ಹೀಗಾಗಿ, ಸಂಭಾವನೆಗಾಗಿ ಹಣ ಸಂಗ್ರಹಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾಡಿರುವ ಕಾಯ್ದೆಯದು. ಆಗೇಕೆ ಅವಕಾಶ ಕೊಟ್ಟರು? ಅವರ ಸರ್ಕಾರದಲ್ಲಿ ಹಣವಿರಲಿಲ್ಲವೇ? ದುಡ್ಡಿದ್ದಿದ್ದರೆ 5 ವರ್ಷಗಳಲ್ಲಿ ಶಾಲೆಗಳಲ್ಲಿ 4,618 ಕೊಠಡಿಗಳನ್ನು ಮಾತ್ರ ಯಾಕೆ ಕಟ್ಟದರು? ಹೆಚ್ಚಿನ ಶಿಕ್ಷಕರನ್ನು ಯಾಕೆ ನೇಮಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಪೋಷಕರಿಂದ ಬಲವಂತವಾಗಿ ಹಣ ಸಂಗ್ರಹಿಸುವಂತೆ ಎಲ್ಲಿಯೂ ಹೇಳಿಲ್ಲ. ಅವರಾಗಿಯೇ ಹಣ ದೇಣಿಗೆ ನೀಡಿದರೆ, ತಿಂಗಳಿಗೆ ₹ 100 ಪಡೆದು ರಸೀದಿ ಕೊಡಬೇಕು. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಕಾನೂನು ಪಂಡಿತ ಎಂದು ಭಾವಿಸಿರುವ ಸಿದ್ದರಾಮಯ್ಯ ಇಂಥದ್ದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಒಂದು ವೇಳೆ ಎಸ್‌ಡಿಎಂಸಿಗಳು ಹಣ ದುರುಪಯೋಗ ಮಾಡಿಕೊಳ್ಳುವುದು ಕಂಡುಬಂದರೆ ಸುತ್ತೋಲೆ ಹಿಂಪಡೆಯಲಾಗುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಚುನಾವಣೆ ವೇಳೆಯೇ ಬಿಜೆಪಿಗೆ ಗುಡ್‌ಬೈ ಹೇಳಿದ ಸಂಸದ ಕರಡಿ ಸಂಗಣ್ಣ : ಕಾಂಗ್ರೆಸ್‌ ಸೇರ್ಪಡೆ

 

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement