ಬೆಂಗಳೂರು: ಕೊರೊನಾ ವೈರಸ್ ಓಮಿಕ್ರಾನ್ ಉಪ ರೂಪಾಂತರಿ ವೈರಸ್‌ಗಳು ಹರಡಲು ಆರಂಭಿಸಿವೆ. ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ BQ.1 ಉಪ ರೂಪಾಂತರಿ ತಳಿಯ ಮೊದಲ ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಸಲಹಾ ಪತ್ರ ಹೊರಡಿಸಲಾಗಿದೆ.
ಪ್ರತಿಯೊಬ್ಬರು ತಪ್ಪದೇ ಮೂರು ಡೋಸ್ ಲಸಿಕೆ ಪಡೆದುಕೊಳ್ಳಬೇಕು ಹಾಗೂ ಕೊರೊನಾ ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನೂ ನೀಡಿರುವ ಸಚಿವ ಡಾ. ಕೆ. ಸುಧಾಕರ ಅವರು, ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ ಎಂದು ಮನವಿ ಮಾಡಿದ್ದಾರೆ.
ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಗಂಟಲು ಕೆರೆತ, ಉಸಿರಾಟದ ಸಮಸ್ಯೆ ಕಾಡಿದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಎಂಟಿಜನ್ ಟೆಸ್ಟ್‌ನಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಹಾಗೂ ಏರ್ ಕಂಡೀಷನ್ ಇರುವ ಒಳಾಂಗಣ, ಗಾಳಿ, ಬೆಳಕು ಇಲ್ಲದ ಪ್ರದೇಶಗಳು, ಸಾರ್ವಜನಿಕ ಪ್ರದೇಶಗಳು, ಬಸ್ ಸ್ಟ್ಯಾಂಡ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿ ತಪ್ಪದೇ ಮಾಸ್ಕ್ ಧರಿಸಿ ಎಂದು ಸಲಹೆ ನೀಡಿದ್ಧಾರೆ.
ಕೋವಿಡ್ ಬೂಸ್ಟರ್ ಡೋಸ್ ಲಸಿಕೆಯನ್ನು ತಪ್ಪದೇ ಎಲ್ಲರೂ ಪಡೆಯಬೇಕು ಎಂದು ಮನವಿ ಮಾಡಿರುವ ಅವರು, ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿರುವವರು ಹಾಗೂ ಕ್ಯಾನ್ಸರ್ ನಿರೋಧಕ ಔಷಧ ತೆಗೆದುಕೊಳ್ಳುತ್ತಿರುವವರು ಬೂಸ್ಟರ್ ಡೋಸ್ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯಿರಿ ಎಂದೂ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ