ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ತಿದ್ದುಪಡಿ ಶಿಫಾರಸ್ಸು ಸರ್ಕಾರಕ್ಕೆ ಸಲ್ಲಿಕೆ: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಕುರಿತು ತಿದ್ದುಪಡಿಗಾಗಿ ಮಾಡಲಾದ ಶಿಫಾರಸ್ಸನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಮಂತ್ರಿಗಳಿಗೆ ಕಳುಹಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಸಾಹಿತ್ಯ ಪರಿಷತ್ತಿನಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಕುರಿತು ನ್ಯಾಯಮೂರ್ತಿಗಳು, ಸಾಹಿತಿಗಳು, ಕನ್ನಡಪರ ಚಿಂತಕರು, ಕನ್ನಡಪರ ಮಠಾಧೀಶರು, ಶಿಕ್ಷಣ ತಜ್ಞರು, ಕಾನೂನು ತಜ್ಞರು, ಕೈಗಾರಿಕೋದ್ಯಮಿಗಳು, ಮಾಧ್ಯಮ ಮುಖ್ಯಸ್ಥರು, ಕನ್ನಡ ಹೋರಾಟಗಾರರು ಹಾಗೂ ವಿವಿಧ ಗಣ್ಯರೊಂದಿಗೆ ನಡೆದ ʻಚಿಂತನಾ ಗೋಷ್ಠಿಯಲ್ಲಿ ಸರ್ವಾನುಮತದಿಂದ ಸ್ವೀಕರಿಸಿದ ಸಲಹೆ-ಸೂಚನೆಗಳನ್ನು ಪರಿಶೀಲಿಸಿ ವಿಧೇಯಕದ ತಿದ್ದುಪಡಿಗಾಗಿ ಮಾಡಲಾದ ಶಿಫಾರಸ್ಸನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ವಿಧಾನ ಸಭೆಯಲ್ಲಿ ಮಂಡನೆಯಾಗಿರುವ ಕನ್ನಡಿಗರ ಬಹುನಿರೀಕ್ಷಿತ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022”ದ ಬಗ್ಗೆ ಅಕ್ಟೋಬರ್ 12ರ ಬುಧವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಚಿಂತನಾ ಗೋಷ್ಠಿಯಲ್ಲಿ ಗಂಭೀರ ಚರ್ಚೆ ನಡೆಸಿದ ನಂತರ ವಿಧೇಯಕ ಅನುಷ್ಠಾನ ಕಾರ್ಯವ್ಯವಸ್ಥೆಯಲ್ಲಿ ಅಧಿಕಾರಿಗಳದ್ದೇ ಪಾರುಪತ್ಯ ಕಂಡುಬರುತ್ತಿದೆ. ಕೇವಲ ಅಧಿಕಾರಿಗಳಿಂದ ಸಮಗ್ರ ಕನ್ನಡ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರನ್ನು ಆಯಾ ಕಾರ್ಯಕ್ರಮ ಅನುಷ್ಠಾನ ಸಮಿತಿಗಳಲ್ಲಿ ಸೇರಿಸಬೇಕು, ಇಲ್ಲದಿದ್ದರೆ ಈ ಕಾಯ್ದೆಗೆ ಸ್ಪಷ್ಟತೆ ಇರುವುದಿಲ್ಲ. ಇದು ನಿಶ್ಯಕ್ತ ಕಾಯಿದೆ ಆಗಬಾರದು, ಸಶಕ್ತ ಕಾಯಿದೆ ಆಗಬೇಕು ಎಂಬ ಸರ್ವಾನುಮತದ ಅಭಿಪ್ರಾಯವ್ಯಕ್ತವಾಗಿತ್ತು ಎಂದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಈ ಚಿಂತನಾ ಗೋಷ್ಠಿಯಲ್ಲಿ ಒಮ್ಮತದಿಂದ ನಿರ್ಧಾರ ಕೈಗೊಂಡು, ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಸರ್ಕಾರದಿಂದ ರಾಜ್ಯ ಸಚಿವ ಸ್ಥಾನಮಾನ ಗೌರವವನ್ನು ಹೊಂದಿರುವಂತಹ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ರಾಜ್ಯಮಟ್ಟದ ಸಮಿತಿಗೆ ಉಪಾಧ್ಯಕ್ಷರಾಗಬೇಕು ಎಂದು ಒಕ್ಕೊರಲಿನಿಂದ ಹೇಳಿ, ಜಿಲ್ಲಾ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಚುನಾಯಿತ ಅಧ್ಯಕ್ಷರುಗಳು ಇರುವಂತೆ, ತಾಲ್ಲೂಕು ಮಟ್ಟದ ಸಮಿತಿಯಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು ಕಾರ್ಯನಿರ್ವಹಿಸಬೇಕು. ಜೊತೆಗೆ ಸರ್ಕಾರಿ ಅಧಿಕಾರೇತರ ಸದಸ್ಯರುಗಳೂ ಈ ಸಮಿತಿಗಳಲ್ಲಿ ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸಾಮೀಜಿಗಳು, ಬೇಲಿಮಠದ ಶ್ರೀ ಶಿವರುದ್ರ ಸಾಮೀಜಿಗಳು, ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ, ಕಾನೂನು ಮತ್ತು ಸಂಸದೀಯ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಮಾಜಿ ಕಾನೂನು ಸಚಿವರಾದ ಎಚ್.ಕೆ. ಪಾಟೀಲ, ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ, ನಿವೃತ್ತ ನ್ಯಾಯಾಧೀಶರಾದ ಶಿವಲಿಂಗೇಗೌಡ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಡಾ.ದೊಡ್ಡರಂಗೇಗೌಡ, ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ್‌ರಾಜ್, ಶಿಕ್ಷಣತಜ್ಞ ಪ್ರಕಾಶ ಹೆಬ್ಬಳ್ಳಿ, ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ ಸೇರಿದಂತೆ ೪೦ ಕ್ಕೂ ಅಧಿಕ ಗಣ್ಯರು ಈ ಚಿಂತನಾಗೋಷ್ಠಿಯಲ್ಲಿ ಭಾಗವಹಿಸಿದ್ದರು ಎಂದು ಡಾ.ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಕನ್ನಡಪರ ಚಿಂತಕ ರಾ.ನಂ ಚಂದ್ರಶೇಖರ, ಶಿಕ್ಷಣ ತಜ್ಞರಾದ ನಿರಂಜನ ಆರಾಧ್ಯ, ಜಿ.ಎಸ್. ಜಯದೇವ, ಮೊದಲಾದ ಗಣ್ಯರು ಅನಿವಾರ್ಯ ಕಾರಣಗಳಿಂದಾಗಿ ಈ ಚಿಂತನಾ ಗೋಷ್ಠಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ, ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಪರಿಷತ್ತಿಗೆ ಸಲ್ಲಿಸಿದ್ದಾರೆ. ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿದ್ದ ಗಣ್ಯರು, ತಜ್ಞರು ಏಕಧ್ವನಿಯಲ್ಲಿ ಕೊಟ್ಟ ಸಲಹೆ-ಸೂಚನೆಗಳನ್ನು ಹಾಗೂ ಲಿಖಿತ ರೂಪದಲ್ಲಿ ಬಂದಂತಹ ಅಭಿಪ್ರಾಯಗಳನ್ನು ಪರಿಗಣಿಸಿ, ಪರಿಶೀಲಿಸಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಕ್ಕೆ ಸೂಕ್ತ ಪರಿಷ್ಕರಣೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement