ಹುಬ್ಬಳ್ಳಿ: ರಾಜ್ಯದ ಧಾರವಾಡ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಬೆಳಗಾವಿಯಲ್ಲಿ ಕೈಗಾರಿಕಾ ವಿಶೇಷ ಟೌನ್‌ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಮುಮ್ಮಿಗಟ್ಟಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ‘ಎಫ್‌ಎಂಸಿಜಿ ಕ್ಲಸ್ಟರ್(ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಬಂಡವಾಳ ಹೂಡಿಕೆದಾರರ ಒಡಂಬಡಿಕೆ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು,
ಮುಂಬೈ- ಚೆನ್ನೈ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಿಂದ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿವೆ. ಅದಕ್ಕೆ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಐದು ಕಡೆ 1 ಸಾವಿರ ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ನಿರ್ಮಿಸಲಾಗುತ್ತದೆ ಎಂದರು.
ಈಗಾಗಲೇ ಚಿತ್ರದುರ್ಗ, ದಾವಣಗೆರೆ, ಬೆಳಗಾವಿಯಲ್ಲಿ ಸ್ಥಳ ಗುರುತಿಸಲಾಗಿದೆ. ಧಾರವಾಡ ಹಾಗೂ ಹಾವೇರಿಯಲ್ಲಿ ಸ್ಥಳ ಗುರುತಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.
ಬಜೆಟ್‌ನಲ್ಲಿ ಘೋಷಿಸಿದಂತೆ ಧಾರವಾಡ ಮತ್ತು ತುಮಕೂರಿನಲ್ಲಿ ವಿಶೇಷ ಹೂಡಿಕಾ ವಲಯ ನಿರ್ಮಾಣ ಮಾಡುವ ಕರಡು ಪ್ರತಿ ಸಿದ್ಧವಾಗಿದೆ. ಬಿಲ್ ಮಂಡಿಸಿ ಶೀಘ್ರ ಜಾರಿಗೊಳಿಸಲಾಗುವುದು. ಗುಜರಾತ್‌ನಲ್ಲಿ ವಿಶೇಷ ಹೂಡಿಕಾ ವಲಯ (ಎಸ್‌ಐಆರ್) ಪದ್ಧತಿ ಜಾರಿಯಲ್ಲಿದೆ. ಇಲ್ಲಿಯೂ ಅದೇ ಮಾದರಿ ಅನುಸರಿಸಲಾಗಿದೆ ಎಂದು ಹೇಳಿದರು.
890 ಕೋಟಿ ರೂ. ವೆಚ್ಚದ ಧಾರವಾಡ-ಬೆಳಗಾವಿ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ಇದೇ ವರ್ಷ ಆರಂಭಿಸಲಾಗುವುದು. ರೈಲ್ವೆ ಯೋಜನೆಗಳಿಗೆ ಶೇ.50ರಷ್ಟು ಅನುದಾನ ಭರಿಸಲು ರಾಜ್ಯ ಸರಕಾರ ಸಿದ್ಧವಿದೆ. ಧಾರವಾಡ- ಬೆಂಗಳೂರು ವಂದೇ ಭಾರತ ರೈಲು ಸಂಚಾರ ಶೀಘ್ರ ಆರಂಭವಾಗಲಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವರಾದ ಹಾಲಪ್ಪ ಆಚಾರ, ಎಂಟಿಬಿ ನಾಗರಾಜ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಬಸವರಾಜ ಹೊರಟ್ಟಿ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ ಮೊದಲಾದವರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ