ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳಕ್ಕೆ ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ತುಮಕೂರು: ಪೊಲೀಸರ ನೇಮಕಾತಿಯ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಹೇಳಿದ್ದಾರೆ.
ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪೊಲೀಸರ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಮಾಡುವಂತೆ ಸಾಕಷ್ಟು ಮನವಿಗಳು ಬಂದಿವೆ. ಪೊಲೀಸ್ ಇಲಾಖೆಯಲ್ಲಿ ಯುವ ಶಕ್ತಿ ಇರಬೇಕು ಎಂಬುದು ನನ್ನ ಆಶಯ. ಆದರೆ ವಯೋಮಿತಿ ಹೆಚ್ಚಿಸುವಂತೆ ಒತ್ತಡಗಳು ಹೆಚ್ಚಾಗುತ್ತಿವೆ. ಹೀಗಾಗಿ ನೇಮಕಾತಿ ಪ್ರಕ್ರಿಯೆ ಒಂದು ತಿಂಗಳು ಕಾಲ ಮುಂದೂಡಲಾಗಿದೆ. ವಯೋಮಿತಿಯನ್ನು ಎರಡು ವರ್ಷ ಸಡಿಲಿಕೆ ಮಾಡುವ ಆಲೋಚನೆ ಇದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ನೂರಾರು ಯುವಕರು ಸಚಿವ ಆರಗ ಜ್ಞಾನೇಂದ್ರ ಕಾಲಿಗೆ ಬಿದ್ದು, ಕಣ್ಣೀರಿಟ್ಟು ವಯೋಮಿತಿ ಸಡಿಲಿಸುವಂತೆ ಮನವಿ ಮಾಡಿಕೊಂಡರು. ಕೋವಿಡ್ ಹಾಗೂ ಮತ್ತಿತರ ಕಾರಣಗಳಿಂದಾಗಿ ಪೊಲೀಸರ ನೇಮಕಾತಿ ನಡೆದಿಲ್ಲ. ಈಗ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿದೆ. ಆದರೆ ವಯೋಮಿತಿ ಸಡಿಲಿಸದಿದ್ದರೆ ಸಾಕಷ್ಟು ಮಂದಿ ಆಕಾಂಕ್ಷಿಗಳು ಅರ್ಹತೆ ಪಡೆಯದೆ ವಂಚಿತರಾಗುತ್ತಾರೆ. ಒಂದು ಬಾರಿಯಾದರೂ ವಯೋಮಿತಿ ಹೆಚ್ಚಿಸಿ ಅವಕಾಶ ಮಾಡಿಕೊಡಬೇಕು ಎಂದು ಯುವಕ, ಯುವತಿಯರು ಮನವಿ ಮಾಡಿಕೊಂಡರು.
ಕನ್ನಡ ರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಸಚಿವರ ಬಳಿಗೆ ಹೋಗಲು ಮನವಿ ಹೊತ್ತು ಬಂದಿದ್ದವರು ಮುನ್ನುಗ್ಗಲು ಯತ್ನಿಸಿದಾಗ ಲಾಠಿ ರುಚಿ ತೋರಿಸಿದರು. ಆದರೂ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement