ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ. ಇದರಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಬಿಜೆಪಿಯ ಎಂ ಕೆ ಪ್ರಾಣೇಶ ಅವರಗೆ ಸಂಕಷ್ಟ ಎದುರಾಗಿದೆ. ಆದರೆ, ಎಂ ಕೆ ಪ್ರಾಣೇಶ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿರುವ ಅರ್ಜಿ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ವಿಧಾನ ಪರಿಷತ್‌ ಚುನಾವಣೆಯಲ್ಲಿ ಆರು ಮತಗಳ ಅಂತರದಲ್ಲಿ ಸೋಲುಂಡಿದ್ದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನ್‌ಗೌಡರ್‌ ನೇತೃತ್ವದ ಏಕಸದಸ್ಯ ಪೀಠವು ಆದೇಶ ನೀಡಿದೆ. ಬೆಂಗಳೂರು ಪೀಠದಲ್ಲಿ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಪೀಠವು ಧಾರವಾಡ ಪೀಠದಲ್ಲಿ ಗುರುವಾರ ತೀರ್ಪು ಪ್ರಕಟಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಸಂವಿಧಾನದ ಕಲಂ 243(6) ಮತ್ತು ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಶನ್ (ಕೆಎಂಸಿ) ಕಾಯಿದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಮುನಿಸಿಪಾಲಿಟಿ ಸಭೆಗಳಲ್ಲೂ ಸಹ ಮತದಾನ ಮಾಡುವ ಹಕ್ಕಿಲ್ಲ, ಹೀಗಾಗಿ, ವಿಧಾನ ಪರಿಷತ್ ಚುನಾವಣೆಯಲ್ಲೂ ಸಹ ಮತದಾನದ ಹಕ್ಕು ಇರುವುದಿಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

ಚಿಕ್ಕಮಗಳೂರು ಕ್ಷೇತ್ರದಿಂದ ನಡೆದ ಚುನಾವಣೆಯ ಮತದಾರರ ಪಟ್ಟಿಗೆ 4 ಪಟ್ಟಣ ಪಂಚಾಯತಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಕಾನೂನುಬಾಹಿರ ಕ್ರಮ. ಸಂವಿಧಾನದ ನಿಯಮಗಳ ಪ್ರಕಾರ ನಾಮನಿರ್ದೇಶಿತ ಸದಸ್ಯರು ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಭಾಗವಹಿಸಬಹುದೇ ಹೊರತು, ಅವರಿಗೆ ಮತದಾನದ ಹಕ್ಕಿಲ್ಲ. ಹೀಗಾಗಿ, ಕಾನೂನು ಬಾಹಿರವಾಗಿ ಅವರಿಗೆ ಮತದಾನದ ಹಕ್ಕು ನೀಡಿರುವುದರಿಂದ ಆ ಮತಗಳ ಆಧಾರದ ಮೇಲೆ ಎಂ ಕೆ ಪ್ರಾಣೇಶ ಗೆಲುವು ಸಾಧಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಚುನಾವಣಾ ಆಯೋಗದ ಪರ ವಕೀಲ ಶರತ್ ದೊಡ್ಡವಾಡ ಅವರು ನಾಮನಿರ್ದೇಶಿತರ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದಾಕ್ಷಣ ವಿಧಾನ ಪರಿಷತ್ ಚುನಾವಣೆಯಲ್ಲೂ ಮತದಾನದ ಹಕ್ಕಿಲ್ಲ ಎಂದು ಹೇಳಲಾಗದು. ಸ್ಥಳೀಯ ಸಂಸ್ಥೆಗಳ ಸಭೆ ಬೇರೆ ಮತ್ತು ವಿಧಾನ ಪರಿಷತ್ ಚುನಾವಣೆಯೇ ಬೇರೆ. ನಾಮನಿರ್ದೇಶಿತರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ ಎಂದು ಎಲ್ಲೂ ನಿರ್ಬಂಧ ಹೇರಿಲ್ಲ ಎಂದು ವಾದಿಸಿದ್ದರು. ಎಂ ಕೆ ಪ್ರಾಣೇಶ ಪರ ವಕೀಲರೂ ಸಹ ಇದೇ ವಾದವನ್ನು ಸಮರ್ಥಿಸಿದ್ದರು ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

2021ರ ನವೆಂಬರ್‌ 9ರಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ 25 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಎಂ ಕೆ ಪ್ರಾಣೇಶ ಅವರು 1,182 ಮತಗಳನ್ನು ಮತ್ತು ಗಾಯಿತ್ರಿ ಅವರು 1,176 ಮತಗಳನ್ನು ಪಡೆದಿದ್ದರು. ಎಂ ಕೆ ಪ್ರಾಣೇಶ ಅವರು 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಪ್ರಾಣೇಶ ಅವರು ಗೆಲುವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಗಾಯತ್ರಿ ಶಾಂತೇಗೌಡ, ಮೂಡಿಗೆರೆ, ಎನ್ ಆರ್ ಪುರ, ಶೃಂಗೇರಿ ಮತ್ತು ಕೊಪ್ಪ ಪುರಸಭೆಗಳ 12 ನಾಮನಿರ್ದೇಶಿತ ಸದಸ್ಯರಿಗೆ ಕಾನೂನು ಬಾಹಿರವಾಗಿ ಮತದಾನದ ಹಕ್ಕು ನೀಡಿರುವುದರಿಂದ ಪ್ರಾಣೇಶ ಗೆಲುವು ಸಾಧಿಸಿದ್ದಾರೆ. ಆದರೆ, ಮೂಲತಃ ಸಂವಿಧಾನದ ನಿಯಮಗಳಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಪ್ರತಿವಾದಿಯ ಆಯ್ಕೆ ಅಕ್ರಮ ಹಾಗೂ ಕಾನೂನು ಬಾಹಿರ. ಹೀಗಾಗಿ, ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಸಾರಬೇಕು ಎಂದು ಕೋರಿದ್ದರು.

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement