ತುರ್ತು ಚಿಕಿತ್ಸೆಗೆ ಯಾವುದೇ ದಾಖಲೆ ಕೇಳುವಂತಿಲ್ಲ: ಸರ್ಕಾರದಿಂದ ಹೊಸ ಮಾರ್ಗದರ್ಶಿ ನಿಯಮ

ಬೆಂಗಳೂರು:ತುರ್ತು ಆರೋಗ್ಯ ಸೇವೆ ನೀಡುವ ಸಂದರ್ಭದಲ್ಲಿ ಯಾವುದೇ ದಾಖಲೆಯನ್ನೂ ಕೇಳದೆ ಮೊದಲು ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ನಂತರ ಎಚ್ಚೆತ್ತುಕೊಂಡ ಸರ್ಕಾರ ಈ ಬಗ್ಗೆ ಮಾರ್ಗದರ್ಶಿ ನಿಯಮಗಳನ್ನು ಪ್ರಕಟಿಸಿದೆ.ತುರ್ತು ಚಿಕಿತ್ಸೆಗೆ ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಇತ್ಯಾದಿ ಯಾವುದೇ ದಾಖಲೆ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸುವ ವೈದ್ಯಾಧಿಕಾರಿ, ಸಿಬ್ಬಂದಿ, ನೌಕರರನ್ನು ಸೇವೆಯಿಂದಲೇ ವಜಾಗೊಳಿಸಲಾಗುವುದು. ಅಲ್ಲದೆ, ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ತುರ್ತು ಆರೋಗ್ಯ ಸೇವೆ ನೀಡುವುದು ಆರೋಗ್ಯ ಕೇಂದ್ರಗಳ ಕರ್ತವ್ಯವಾಗಿದೆ. ದಾಖಲೆ ಇಲ್ಲದಿದ್ದರೂ ಚಿಕಿತ್ಸೆ ನೀಡಬೇಕು. ಆರೋಗ್ಯ ಸೇವೆ ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ನೋಡುವ ಅಗತ್ಯವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ಚಿಕಿತ್ಸೆ ನೀಡುವುದು ವೈದ್ಯರು, ಶುಶ್ರೂಷಕರು ಮತ್ತು ಇತರೆ ಸಿಬ್ಬಂದಿಯ ಆದ್ಯ ಕರ್ತವ್ಯ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಸಂದರ್ಭದಲ್ಲಿ ರೋಗಿಯ ಯಾವುದೇ ತರಹದ ದಾಖಲೆಗಳನ್ನು ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ತುಮಕೂರಿನಲ್ಲಿ ಬಾಣಂತಿ ಮತ್ತು ನವಜಾತ ಅವಳಿ ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದ ಆರೋಪ ಕೇಳಿಬಂದ ನಂತರ ಹಾಗೂ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ತುಮಕೂರು ಜಿಲ್ಲಾಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರು ಹಾಗೂ ಮೂವರು ಶುಶ್ರೂಷಕಿಯರನ್ನು ಕರ್ತವ್ಯ ಲೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement