ಧಾರವಾಡ: ಹೆಸರಾಂತ ವಿದ್ವಾಂಸ ಪಂ. ಜಯತೀರ್ಥ ಆಚಾರ್ಯ ಮಳಗಿ ನಿಧನ

ಧಾರವಾಡ: ವಿದ್ವಾಂಸ ಪಂಡಿತ ಜಯತೀರ್ಥಾಚಾರ್ಯ ಮಳಗಿ ಅವರು ಇಂದು, ಭಾನುವಾರ ನಿಧನರಾದರು. ಅವರಿಗೆ 73  ವರ್ಷ ವಯಸ್ಸಾಗಿತ್ತು.
ಮೃತರು ಒಬ್ಬ ಮಗ, ಒಬ್ಬ ಮಗಳು, ಬಂಧು ಬಳಗ ಹಾಗೂ ಅಪಾರ ಶಿಷ್ಯವರ್ಗ, ಬಂಧಗಳನ್ನು ಅಗಲಿದ್ದಾರೆ.
ಪಂಡಿತ ಜಯತೀರ್ಥಾಚಾರ್ಯ ವಾಸುದೇವಾಚಾರ್ಯ ಮಳಗಿ ಅವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ವೇದವ್ಯಾಸ ಅನೇಕ ಗ್ರಂಥಗಳ ಕರ್ತೃವಾಗಿ, ಧಾರ್ಮಿಕ ಪತ್ರಿಕೆಗಳ ಸಂಪಾದಕರಾಗಿ, ಪ್ರವಚನಕಾರರಾಗಿ ಹೀಗೆ ಬಹುಮುಖ ಪ್ರತಿಭೆಯವರಾಗಿದ್ದ ವಿದ್ವಾಂಸರು ಪಂಡಿತ ಮಳಗಿ ಜಯತೀರ್ಥಾಚಾರ್ಯರು ವಿದ್ಯಾಪೀಠದ ಸ್ಥಾಪಕ ಅಧ್ಯಕ್ಷರಾಗಿದ್ದರು.
1949ರ ಜೂನ್ 5ರಂದು ಜನಿಸಿದ್ದ ಜಯತೀರ್ಥಾಚಾರ್ಯ ವಾಸುದೇವಾಚಾರ್ಯ ಮಳಗಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಜವಾಹರಲಾಲ್ ಸಂಸ್ಕೃತವಿದ್ಯಾಲಯದಿಂದ ಸಾಹಿತ್ಯ ಶಿರೋಮಣಿ, ಭಾರತೀಯ ವಿದ್ಯಾಭವನ, ಮುಂಬಯಿಯಿಂದ ಸಂಸ್ಕೃತಕೋವಿದ, ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತವಿಶ್ವವಿದ್ಯಾನಿಲಯದಿಂದ ವೇದಾಂತ ಶಾಸ್ತ್ರಿ, ಧರ್ಮಶಾಸ್ತ್ರಾಚಾರ್ಯ, ಅಲಹಾಬಾದ್ ಹಿಂದಿ ವಿಶ್ವವಿದ್ಯಾಲಯದಿಂದ ದರ್ಶನ ವಿಶಾರದ, ಹಿಂದಿ ವಿಶಾರದ, ಹಿಂದಿ ಸಾಹಿತ್ಯರತ್ನ, ಭಾರತೀಯ ವಿದ್ಯಾಭವನದಿಂದ ವೇದಾಂತ ವಾಚಸ್ಪತಿ, ಮುಂಬಯಿ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪಡವಿ, ಪುಣೆ ವಿಶ್ವವಿದ್ಯಾನಿಲಯದಿಂದ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಮುಂಬಯಿಯ ಶ್ರೀಸತ್ಯಧ್ಯಾನ ವಿದ್ಯಾಪೀಠದಲ್ಲಿ ವೇದಾಂತ, ನ್ಯಾಯ, ಮೀಮಾಂಸಾ, ಸಾಹಿತ್ಯ,ವ್ಯಾಕರಣ ಮೊದಲಾದ ಶಾಸ್ತ್ರಗಳ ಆಳವಾದ ಅಧ್ಯಯನ ನಡೆಸಿದ್ದ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಮಾಧ್ವ ವಾಙ್ಮಯಕ್ಕೆ ಹಾಗೂ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಅಸಂಖ್ಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. 43ಕ್ಕೂ ಹೆಚ್ಚು ಗ್ರಂಥಗಳು ಹಾಗೂ ಕೃತಿಗಳನ್ನು ರಚಿಸಿದ್ದಾರೆ.
ಮುಖ್ಯವಾಗಿ ಶ್ರೀಸತ್ಯಧ್ಯಾನರು, ಶ್ರೀಸತ್ಯಧ್ಯಾನರ ನುಡಿಮುತ್ತುಗಳು, ಕುಲಪತಿ, ಕ್ಷೇಮೇಂದ್ರನ ಸುಭಾಷಿತಗಳು, ಲೇಖನ ತರಂಗಿಣಿ, ಷಟ್ ಪ್ರಶ್ನೋಪನಿಷತ್ತು, ಪ್ರಮೋದ ತರಂಗಿಣೀ, ಸತ್ಯಧ್ಯಾನ ಜೀವನ ರಶ್ಮಿ,ಸತ್ಯಧ್ಯಾನ ಚರಿತಾಮೃತ, ಶ್ರೀಮಧ್ವರು ನಿರೂಪಿಸಿದ ರಾಮ, ಮಧ್ವರು ನಿರೂಪಿಸಿದ ಶ್ರೀಸೀತಾ, ಮಾಧವತೀರ್ಥರು, ಉತ್ತರಾದಿ ಮಠದ ಇತಿಹಾಸ, ಹರಿದಾಸಸಾಹಿತ್ಯದ ಇತಿಹಾಸ, ಶ್ರೀಸತ್ಯಬೋಧತೀರ್ಥರು, ಶ್ರೀಸತ್ಯವೀರತೀರ್ಥರು, ಶ್ರೀಸತ್ಯಧ್ಯಾನತೀರ್ಥರು(ಇಂಗ್ಲೀಷ್), ಶ್ರೀಸತ್ಯಸಂಧರು, ಪ್ರಮೋದ ತರಂಗಿಣೀ(ಇಂಗ್ಲಿಷ್), ಹರಿದಾಸರ ಮುಂಡಿಗೆಗಳು, ಹರಿದಾಸರ ಮುಂಡಿಗೆಗಳು ಭಾಗ 2, ಶ್ರೀಜಯತೀರ್ಥವಿಜಯ, ಶ್ರೀಸತ್ಯಧ್ಯಾನ ವಾಣಿ, ಶ್ರೀವ್ಯಾಸ ಮಧ್ವರ ಭೀಮ, ಶ್ರೀಸತ್ಯಧ್ಯಾನ ಲೇಖನತರಂಗಿಣಿ (ಎರಡು ಭಾಗಗಳಲ್ಲಿ), ಶ್ರೀರಾಘವೇಂದ್ರ ವಿದ್ಯಾವೈಭವ, ಕನಕನ ಮುಂಡಿಗೆಗಳು, ಶ್ರೀಪದ್ಮನಾಭತೀರ್ಥರು, ದೇವಲಸ್ಮೃತಿ ಒಂದು ಅಧ್ಯಯನ, ತೊರವಿ ರಾಮಾಯಣ ಪ್ರಶಸ್ತಿ, ಗೋಪಾಲದಾಸರು ಕಂಡ ಗುರುರಾಜರು, ಶ್ರೀಸತ್ಯಜ್ಞಾನತೀರ್ಥರು, ಶ್ರೀಕೃಷ್ಣಾವತಾರ, ವಾಸ್ತುಶಾಸ್ತ್ರದ ಮಹತ್ತ್ವ, ಶ್ರೀಹನುಮಂತದೇವರು, ಶ್ರೀಕೃಷ್ಣ, ಶ್ರೀಜಯತೀರ್ಥರು, ಪೊಡವಿಗೊಡೆಯ ಕಡಗೋಲಶ್ರೀಕೃಷ್ಣ, ಬೆಳಕಿನ ಬರಹಗಳು-ಹೀಗೆ ತಮ್ಮ ವಿದ್ವತ್ಪೂರ್ಣಗ್ರಂಥಗಳನ್ನು ರಚಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಉತ್ತರಾದಿಮಠದಿಂದ ಪ್ರಕಟವಾಗುತ್ತಿರುವ ಶ್ರೀಸುಧಾ ಮಾಸಿಕದ ಮುಖ್ಯ ಸಂಪಾದಕರಾಗಿ ಮೂವತ್ತು ವರ್ಷ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಧಾರವಾಡದ ಸತ್ಯಧ್ಯಾನ ಗ್ರಂಥಮಾಲೆ, ಟಿ.ಟಿ.ಡಿಯ ದಾಸಸಾಹಿತ್ಯ ಪ್ರಾಜೆಕ್ಟ್ ನ ಗ್ರಂಥಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜಯತೀರ್ಥಾಚಾರ್ಯರು ಅನೇಕ ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದಾರೆ. ಶ್ರೀ ಪಲಿಮಾರು ಶ್ರೀಗಳಿಂದ ‘ಪಂಡಿತರತ್ನಂ’, ಪ್ರಶಸ್ತಿ, ಸಚ್ಛಾಸ್ತ್ರವಿಚಕ್ಷಣರತ್ನಂ, ಶ್ರೀವಿದ್ಯಾಮಾನ್ಯ ಪ್ರಶಸ್ತಿ, ವಿದ್ಯಾನಿಧಿ ಪ್ರಶಸ್ತಿ, ಶ್ರೀಪೇಜಾವರ ಮಠಾಧೀಶರಿಂದ ‘ವಿಜಯಧ್ವಜ ಪ್ರಶಸ್ತಿ’, ಶ್ರೀ ಭಂಡಾರಕೇರಿ ಶ್ರೀಗಳಿಂದ ‘ವಾಗ್ವೈಖರಿಮಾನ್ಯ’ಪ್ರಶಸ್ತಿ ಹಾಗೂ ಶ್ರೀಉತ್ತರಾದಿಮಠಾಧೀಶರಿಂದ ‘ಧ್ಯಾನಪ್ರಮೋದ’ಪ್ರಶಸ್ತಿಗಳು ಇವುಗಳಲ್ಲಿ ಪ್ರಮುಖವಾದವು.
ಅಲ್ಲದೆ, ವಿದ್ಯಾವರ್ಧಕ ಸಂಘದಿಂದ ‘ಪ್ರವಚನ ಸಿಂಹ’ ಗೌರವಗಳಿಗೂ ಭಾಜನರಾಗಿದ್ದಾರೆ. ಅನೇಕ ರಾಷ್ಟ್ರಮಟ್ಟದ ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸಂಸ್ಕೃತಸಾಹಿತ್ಯ ಕುರಿತ ಅನೇಕ ರಾಷ್ಟ್ರೀಯ ವಿಚಾರಸಂಕಿರಣಗಳ ಆಯೋಜನೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement