ಮತದಾರರ ಮಾಹಿತಿ ಸಂಗ್ರಹಣೆಯಲ್ಲಿ ಮಾಹಿತಿ ಕಳುವು ಆರೋಪ: ಚಿಲುಮೆ ಸಂಸ್ಥೆ ನಿರ್ದೇಶಕನ ಬಂಧನ

ಬೆಂಗಳೂರು: ಮತದಾರರ ಮಾಹಿತಿ ಸಂಗ್ರಹಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆರೋಪಿತ ಅಕ್ರಮದ ತನಿಖೆ ಚುರುಕುಗೊಳಿಸಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು, ಚಿಲುಮೆ ಸಂಸ್ಥೆಯ ನಿರ್ದೇಶಕ ಎನ್ನಲಾದ ಕೆಂಪೇಗೌಡ ಎಂಬಾತನನ್ನು ಬಂಧಿಸಿದ್ದಾರೆ.
ಕೆಂಪೇಗೌಡ, ಸಂಸ್ಥೆಯ ಆರ್ಥಿಕ ವ್ಯವಹಾರ ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದ್ದು, ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ ಸಹೋದರ ಎನ್ನಲಾಗಿದೆ. ಪ್ರಾಥಮಿಕ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

ಈ ಮಧ್ಯೆ ಆರೋಪಿತ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ ಪತ್ನಿ ಐಶ್ವರ್ಯಾ, ಕೆಂಪೇಗೌಡ ಪತ್ನಿ ಶ್ರುತಿ ಅವರನ್ನೂ ತನಿಖಾಧಿಕಾರಿಗಳ ತಂಡ ತೀವ್ರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಮತದಾರರ ಮಾಹಿತಿ ಸಂಗ್ರಹಣೆ ಮತ್ತು ಗುರುತಿನ ಚೀಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆರೋಪಿತ ಅಕ್ರಮದ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ ಮತ್ತು ಚುನಾವಣೆ) ರಂಗಪ್ಪ ಅವರ ದೂರು ಆಧರಿಸಿ ಚಿಲುಮೆ ಸಂಸ್ಥೆಯ ಮೂವರು ಸಿಬ್ಬಂದಿಯನ್ನು ಶುಕ್ರವಾರ ಬಂಧಿಸಲಾಗಿತ್ತು. ತಲೆಮರೆಸಿಕೊಂಡಿರುವ ರವಿಕುಮಾರ ಹಾಗೂ ಇತರರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಹಲವು ಕಡೆ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಲುಮೆ ಸಂಸ್ಥೆಯ ಕಾರ್ಯನಿರ್ವಹಣೆ, ಹಣಕಾಸು ವ್ಯವಹಾರದ ಬಗ್ಗೆ ಇನ್ನಷ್ಟೇ ತನಿಖೆ ಆಗಬೇಕಿದೆ. ಸಂಸ್ಥೆ ಹಾಗೂ ಆರೋಪಿಗಳ ಬ್ಯಾಂಕ್‌ ಖಾತೆಗಳಲ್ಲಿ ಹಣ ವರ್ಗಾವಣೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ಮಲ್ಲೇಶ್ವರದಲ್ಲಿನ ಚಿಲುಮೆ ಸಂಸ್ಥೆಯ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಹಣ ಎಣಿಸುವ ಯಂತ್ರ ಸಿಕ್ಕಿದೆ. ಅಲ್ಲದೆ, ಹಾರ್ಡ್‌ ಡಿಸ್ಕ್‌, ಮತದಾರರ ಗುರುತಿನ ಚೀಟಿಗಳ ಪಟ್ಟಿ, ಮೂರು ಪ್ರಿಂಟರ್‌, ಮೊಬೈಲ್‌ಗಳು ಜಪ್ತಿಯಾಗಿವೆ ಎಂದು ಅಧಿಕಾರಿ ಹೇಳಿದರು.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

 

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement