ದುಬೈ ಪ್ರವಾಸ ಮಾಡಲು ಡಿ. ಕೆ. ಶಿವಕುಮಾರಗೆ ಅನುಮತಿ ನೀಡಿದ ವಿಶೇಷ ನ್ಯಾಯಾಲಯ

ನವದೆಹಲಿ: ದುಬೈನಲ್ಲಿ ನಡೆಯಲಿರುವ ವಾಣಿಜ್ಯೋದ್ಯಮ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಶನಿವಾರ ದೆಹಲಿಯ ವಿಶೇಷ ನ್ಯಾಯಾಲಯವು ಅನುಮತಿಸಿದೆ.
ಡಿಸೆಂಬರ್‌ 1ರಿಂದ 8ರವರೆಗೆ ದುಬೈ ಪ್ರವಾಸ ಕೈಗೊಳ್ಳಲು ಅನುಮತಿಸುವಂತೆ ಕೋರಿ ಶಿವಕುಮಾರ ಅವರು ಸಲ್ಲಿಸಿದ್ದ ಅರ್ಜಿಯನ್ನು ಷರತ್ತಿಗೆ ಒಳಪಟ್ಟು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಕಾಸ್‌ ಧಲ್‌ ಅವರು ಮಾನ್ಯ ಮಾಡಿದ್ದಾರೆ.
ಪ್ರವಾಸ ಆರಂಭಿಸುವುದಕ್ಕೂ ಮುನ್ನ ಅರ್ಜಿದಾರ ಶಿವಕುಮಾರ್‌ ಅವರು ಐದು ಲಕ್ಷ ರೂ. ಭದ್ರತಾ ಠೇವಣಿಯನ್ನು ನ್ಯಾಯಾಲಯಕ್ಕೆ ನೀಡಬೇಕು. ಅರ್ಜಿದಾರರು ದುಬೈಗೆ ತೆರಳುವ ಮತ್ತು ಮರಳುವ ದಿನಾಂಕ, ಅಲ್ಲಿ ಉಳಿದುಕೊಳ್ಳುವ ವಿಳಾಸ, ಸಂಪರ್ಕ ಸಂಖ್ಯೆ ನೀಡಬೇಕು. ಸಹ ಆರೋಪಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಬಾರದು. ವಿದೇಶ ಪ್ರವಾಸದಲ್ಲಿರುವಾಗ ಪ್ರಕರಣದಲ್ಲಿನ ಸಾಕ್ಷಿಗಳನ್ನು ಸಂಪರ್ಕಿಸುವ ಯತ್ನ ಮಾಡಬಾರದು. ವಿದೇಶದಿಂದ ಮರಳಿದ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ನ್ಯಾಯಾಲಯವು ಷರತ್ತುಗಳನ್ನು ವಿಧಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement