ಓಲಾ, ಉಬರ್‌ ಆಟೋ ಸರ್ವಿಸ್‌ : ಶೇ.5 ಸೇವಾ ಶುಲ್ಕ, ಜಿಎಸ್‌ಟಿ ಸೇರಿಸಿ ಪ್ರಯಾಣ ದರ ನಿಗದಿ ಕುರಿತು ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬೆಂಗಳೂರು: ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ. 5 ಜಿಎಸ್‌ಟಿ ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿ, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌. ಜಿ. ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲರು ಸರ್ಕಾರದ ಅಧಿಸೂಚನೆಯನ್ನು ಪೀಠಕ್ಕೆ ಸಲ್ಲಿಸಿದ ನಂತರ ಅದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.
ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶ ಮುಂದಿನ ವಿಚಾರಣೆವರೆಗೂ ವಿಸ್ತರಣೆಯಾಗಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement