ಬೆಂಗಳೂರು: ಮಕ್ಕಳಿಗೆ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವೈಕಲ್ಯ ಉಂಟು ಮಾಡುವ ಜೆಇ ಮೆದುಳು ಜ್ವರ (ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಡಿಸೆಂಬರ್ 5ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ.
ಈ ಅಭಿಯಾನದಡಿ 1ರಿಂದ 15 ವರ್ಷದ ಸುಮಾರು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಜೆಇ ಲಸಿಕಾ ಅಭಿಯಾನ ಕುರಿತು ಮಾಹಿತಿ ನೀಡಿದ ಸಚಿವರು, ಡಿಸೆಂಬರ್ ಮೊದಲನೇ ವಾರದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಬೇರೆ ಬೇರೆ ಪ್ರದೇಶಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತ ಸೇರಿದಂತೆ ಏಷ್ಯಾದ 11 ರಾಷ್ಟ್ರಗಳು ಜಪಾನೀಸ್ ಎನ್ಸೆಫಲೈಟಿಸ್ (ಜೆಇ) ಪಿಡುಗು ಪಟ್ಟಿಯಲ್ಲಿದೆ. ದೇಶದಲ್ಲಿ ಪ್ರತಿ ವರ್ಷ ಸರಾಸರಿ 68,000 ಪ್ರಕರಣಗಳು ವರದಿಯಾಗುತ್ತಿದ್ದು, ಮರಣ ಪ್ರಮಾಣ ಶೇ.20 ರಿಂದ ಶೇ.30 ರಷ್ಟಿದೆ. ಗುಣಮುಖರಾದ ಶೇ.30 ರಿಂದ ಶೇ.50 ರಷ್ಟು ಪ್ರಕರಣಗಳಲ್ಲಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವೈಕಲ್ಯ ಉಂಟಾಗಿದೆ ಎಂದು ಸಚಿವರು ತಿಳಿಸಿದರು.
ರೋಗ ಪತ್ತೆ ಮಾಡಲು ರಾಜ್ಯದಲ್ಲಿ ಸೆಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ (ಎಸ್ಎಸ್ಎಲ್)ಗಳನ್ನು ಸಿದ್ಧಪಡಿಸಲಾಗಿದೆ. ನಿಮ್ಹಾನ್ಸ್ – ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್ – ಬಳ್ಳಾರಿ, ಕಿಮ್ಸ್ – ಹುಬ್ಬಳ್ಳಿ, ಡಿಪಿಎಚ್ಎಲ್ – ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ – ಉಡುಪಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐವಿ) – ಬೆಂಗಳೂರು ಈ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜೆಇ ಮೆದುಳು ಜ್ವರ ‘ಪ್ಲೇವಿ ವೈರಸ್’ ಹೆಸರಿನ ವೈರಸ್ನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕಾಡಿನ ಪಕ್ಷಿಗಳಲ್ಲಿರುವ ಈ ವೈರಾಣುವಿಗೆ ಮನುಷ್ಯ ಕಡೆಯ ಹೋಸ್ಟ್ ಆಗಿರುತ್ತಾನೆ.


ನಿಮ್ಮ ಕಾಮೆಂಟ್ ಬರೆಯಿರಿ