ಹಿಮಾಚಲ ಪ್ರದೇಶ ಚುನಾವಣೆ : ಕಾಂಗ್ರೆಸ್‌- ಬಿಜೆಪಿ ನಡುವಿನ ಮತದ ಅಂತರ ಕೇವಲ ಶೇ.0.9ರಷ್ಟು ಮಾತ್ರ…

ನವದೆಹಲಿ: 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಗಳಿಸಿದೆ. ಹಿಂದಿನ ವಿಧಾನಸಭೆಯಲ್ಲಿ 44 ಸ್ಥಾನಗಳನ್ನು ಗೆದ್ದಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಬಾರಿ 25 ಶಾಸಕರೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಿಮಾಚಲ ಪ್ರದೇಶದ ಈ ಚುನಾವಣೆಯ ಫಲಿತಾಂಶದಲ್ಲಿನ ಕುತೂಹಲಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ ಹಂಚಿಕೆ ವ್ಯತ್ಯಾಸವು ಕೇವಲ 0.9%ರಷ್ಟು ಮಾತ್ರ. ಆದರೆ ಇದು ಕಾಂಗ್ರೆಸ್‌ಗೆ ಬಿಜೆಪಿಗಿಂತ 15 ಸ್ಥಾನಗಳನ್ನು ಹೆಚ್ಚಿಗೆ ನೀಡಿದೆ. ಆಮ್ ಆದ್ಮಿ ಪಕ್ಷವು 1.1% ಮತಗಳನ್ನು ಪಡೆದಿದೆ.
ಕಾಂಗ್ರೆಸ್ ಸುಮಾರು 18.52 ಲಕ್ಷ ಮತಗಳನ್ನು ಪಡೆದರೆ, ಬಿಜೆಪಿ 18.14 ಲಕ್ಷ ಮತಗಳನ್ನು ಪಡೆದಿದೆ.
2,500ಕ್ಕಿಂತ ಕಡಿಮೆ ಮತಗಳ ಅಂತರದಿಂದ ಬಿಜೆಪಿ ವಿರುದ್ಧ ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಜಯಗಳಿಸಿದೆ. ಭೋರಂಜ್ ಕ್ಷೇತ್ರವನ್ನು ಕಾಂಗ್ರೆಸ್‌ನ ಸುರೇಶ್ ಕುಮಾರ್ ಕೇವಲ 60 ಮತಗಳಿಂದ ಗೆದ್ದುಕೊಂಡರೆ, ವಿನಯಕುಮಾರ ಅವರು ಶ್ರೀ ರೇಣುಕಾಜಿ ಕ್ಷೇತ್ರದಲ್ಲಿ 860 ಮತಗಳಿಂದ ಗೆದ್ದಿದ್ದಾರೆ. ರಾಜೀಂದರ್ ಸಿಂಗ್ ಸುಜಾನ್‌ಪುರದಲ್ಲಿ ಕೇವಲ 399 ಮತಗಳಿಂದ ಜಯಗಳಿಸಿದರೆ, ನಂದಲಾಲ ಅವರು ರಾಂಪುರ ಕ್ಷೇತ್ರವನ್ನು 567 ಮತಗಳಿಂದ ಗೆದ್ದರು. ಹರ್ಷವರ್ಧನ ಚೌಹಾಣ್ ಅವರು 382 ಮತಗಳಿಂದ ಶಿಲ್ಲೈ ಕ್ಷೇತ್ರವನ್ನು ಗೆದ್ದುಕೊಂಡರೆ, ರವಿ ಠಾಕೂರ್ ಅವರು ಲಾಹೌಲ್ ಮತ್ತು ಸ್ಪಿತಿ ಕ್ಷೇತ್ರವನ್ನು 1,616 ಮತಗಳಿಂದ ಪಡೆದುಕೊಂಡರು. ಅಜಯ್ ಸೋಲಂಕಿ ಅವರು ನಹಾನ್ ಕ್ಷೇತ್ರವನ್ನು 1,639 ಮತಗಳಿಂದ ಗೆದ್ದರು ಮತ್ತು ಮಲೆಂದರ್ ರಾಜನ್ ಇಂಡೋರಾ ಸ್ಥಾನವನ್ನು 2,250 ಮತಗಳಿಂದ ಗೆಲುವು ಕಂಡಿದ್ದಾರೆ.
ಬಿಜೆಪಿಯು 276 ಮತಗಳ (ಬಿಲಾಸ್‌ಪುರ), ದರಂಗ್ (618 ಮತಗಳು), ಮತ್ತು ಸರ್ಕಾಘಾಟ್‌ನಲ್ಲಿ 1,807 ಮತಗಳ ಅತ್ಯಂತ ಕಡಿಮೆ ಅಂತರದಿಂದ ಗೆಲುವು ಕಂಡಿದೆ.
ಇತರ ಪಕ್ಷಗಳು ಅಥವಾ ಸ್ವತಂತ್ರರು, ಅದರಲ್ಲಿಯೂ ವಿಶೇಷವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ಬಿಜೆಪಿಯ ಮತಗಳನ್ನು ಕಡಿತಗೊಳಿಸುವುದು ಸಹ ಕಾಂಗ್ರೆಸ್‌ನ ಹೆಚ್ಚಿನ ಸ್ಥಾನ ಪಡೆಯಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.
2017ರಲ್ಲಿ ಬಿಜೆಪಿ 44 ಸ್ಥಾನ ಗೆದ್ದರೆ ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಗೆಲುವು ಕಂಡಿತ್ತು, ಇತರರು 3 ಸ್ಥಾನಗಳನ್ನು ಗೆದ್ದಿದ್ದರು.ಆ ಚುನಾವಣೆಯಲ್ಲಿ ಬಿಜೆಪಿಗೆ ಶೇ.48.8, ಕಾಂಗ್ರೆಸ್‌ ಶೇ. 41.7, ಇತರರಿಗೆ ಶೇ.9.5 ರಷ್ಟು ಮತ ಬಿದ್ದಿತ್ತು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement