ಹಿರಿಯ ನಾಯಕರ ಕಡೆಗಣನೆಯಿಂದ ಕಳಪೆ ಫಲಿತಾಂಶ : ಗುಜರಾತ್‌ ಸೋಲಿಗೆ ಕಾರಣ ಹೇಳಿದ ವೀರಪ್ಪ ಮೊಯ್ಲಿ

ಬೆಂಗಳೂರು: ಗುಜರಾತ್‍ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿದ ಪರಿಣಾಮ ಕಾಂಗ್ರೆಸ್‌ಗೆ ಹೀನಾಯ ಸೋಲುಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಕ್ಷಕ್ಕೆ ಯಶಸ್ಸು ತಂದುಕೊಟ್ಟವರನ್ನು ಗೌರವಿಸಲೇಬೇಕು. ಹಿಮಾಚಲಪ್ರದೇಶದಲ್ಲಿ ವೀರಭದ್ರ ಸಿಂಗ್ ಪಕ್ಷವನ್ನು ಗೆಲ್ಲಿಸಿದರು. ಅವರ ಬಳಿಕ ಅವರ ಪತ್ನಿ ಪ್ರತಿಭಾ ಸಿಂಗ್‍ರನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಲಾಯಿತು ಎಂದು ಅವರು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಅಲ್ಲಿ 68 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 40ರಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಕಾಲಕ್ಕನುಗುಣವಾದ ಹಲವಾರು ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾದ ನಾಯಕರನ್ನು ಪಕ್ಷವು ಗೌರವಿಸಬೇಕು, ಗುರುತಿಸಬೇಕು ಎಂದು ಅವರು ಸಲಹೆ ನೀಡಿದರು.

ಗುಜರಾತ್‌ನಲ್ಲಿ ಅದನ್ನು ನಾವು ಮಾಡದೇ ಕಾಂಗ್ರೆಸ್ ಅನ್ನು ಬೆಳೆಸಲು ಹೇಗೆ ಸಾಧ್ಯವಾಗುತ್ತದೆ. ಗುಜರಾತ್‌ನಲ್ಲಿ ನಾಯಕರನ್ನು ನಿರಾಸೆಗೊಳಿಸಲಾಗಿದೆ. ಇದು ನಾವು ಕಲಿಯಬೇಕಾದ ಪಾಠವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವೀಕ್ಷಕರು ರಾಜ್ಯ ನಾಯಕರ ಮೇಲೆ ಹೇರಬಾರದು ಬದಲಿಗೆ ಅವರೊಗೆ ಮಾನ್ಯತೆ ನೀಡಬೇಕು. ಇದರಿಂದ ಅವರು ಯಾವಾಗಲೂ ಪಕ್ಷಕ್ಕಾಗಿ ಕೆಲಸ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ಬಾರಿ ಗುಜರಾತ್ ನಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶವನ್ನು ಪಡೆದಿತ್ತು (2017 ರಲ್ಲಿ 77 ಸ್ಥಾನ). ಆದರೆ ಎಲ್ಲ ನಾಯಕರನ್ನು ಬದಲಾಯಿಸಲಾಗಿದೆ, ಅವರಿಗೆ ಸರಿಯಾಗಿ ಗೌರವ ಮತ್ತು ಮನ್ನಣೆ ನೀಡಲಾಗಿಲ್ಲ ‘ಎಂದು ಮೊಯ್ಲಿ ಹೇಳಿದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement