ನವದೆಹಲಿ: ಅಂತಾರಾಜ್ಯ ನದಿ ನೀರಿನ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು, ಮಂಗಳವಾರ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ, ಕೃಷ್ಣಾ, ಮಹದಾಯಿ ಅಂತರ್ ರಾಜ್ಯ ನದಿ ನೀರಿನ ಹಂಚಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ನೀರಾವರಿ ಯೋಜಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿರುವ ವಿಷಯದ ಕುರಿತು ವಿವರವಾಗಿ ಪ್ರಧಾನಿ ಮೋದಿ ಅವರಿಗೆ ವಿವರಿಸಿದ್ದೇನೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರಧಾನಿ ಮೋದಿ “ಈ ಜಾಗದಲ್ಲಿ ಕೂತು ತೀರ್ಮಾನ ಮಾಡೊದು ಹಿಂಸೆಯಾಗಿದೆ ದೇವೇಗೌಡರೇ. ನದಿ ನೀರಿನ ವ್ಯಾಜ್ಯಗಳ ತೀರ್ಮಾನ ಕಷ್ಟವಾಗಿದೆ. ನಮ್ಮದೆ ಸರಕಾರ ಇದ್ದರೂ ನರ್ಮದಾ ತೀರ್ಮಾನ ಕಷ್ಟವಾಗಿದೆ. ಎಲ್ಲಾ ಅನೇಕ ನದಿಗಳ ವಿವಾದಗಳಿವೆ. ಯಾವ ನಿರ್ಧಾರ ತೆಗೆದುಕೊಳ್ಳುವುದು..? ಎಂದು ರಧಾನಿ ಮೋದಿ ನದಿ ವಿವಾದದ ನಿರ್ಧಾರದ ಬಗ್ಗೆ ಇರುವ ಕಷ್ಟ ಹೇಳಿಕೊಂಡರು ಎಂದು ದೇವೇಗೌಡ ತಿಳಿಸಿದ್ದಾರೆ.
ಹಾಸನ ವಿಮಾನ ನಿಲ್ದಾಣ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆಯೂ ಪ್ರಧಾನಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಾನು ಪ್ರಸ್ತಾಪಿಸಿರುವ ಎಲ್ಲಾ ವಿಷಯಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದಾರೆ. ಎಲ್ಲಾ ದಾಖಲೆಗಳನ್ನು ಅವರು ಪರಿಶೀಲಿಸಿದ್ದು, ಪರಿಗಣಿಸುವ ಭರವಸೆ ನೀಡಿದ್ದಾರೆ ಎಂದು ದೇವೇಗೌಡ ಅವರು ಮಾಹಿತಿ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ