ನವದೆಹಲಿ: ಪತ್ನಿಯೊಂದಿಗೆ ಜಗಳ ಮಾಡಿದ ನಂತರ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗನನ್ನು ಮೂರು ಅಂತಸ್ತಿನ ಮನೆಯ ಬಾಲ್ಕನಿಯಿಂದ ಎಸೆದು ನಂತರ ತಾನೂ ಜಿಗಿದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂದೆ ಮತ್ತು ಮಗುವಿಗೆ ಗಂಭೀರ ಗಾಯಗಳಾಗಿದ್ದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ನವದೆಹಲಿಯ ಕಲ್ಕಾಜಿಯ ಕೊಳೆಗೇರಿಯಲ್ಲಿ ಈ ಘಟನೆ ವರದಿಯಾಗಿದೆ.
ವಿವಾದದ ಹಿನ್ನೆಲೆಯಲ್ಲಿ ಮಾನ್ ಸಿಂಗ್ ಮತ್ತು ಆತನ ಪತ್ನಿ ಪೂಜಾ ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪೂಜಾ ಪ್ರಸ್ತುತ ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ತಂಗಿದ್ದಳು.
ಕಳೆದ ರಾತ್ರಿ ಮಾನ್ ಸಿಂಗ್ ಅವರನ್ನು ಭೇಟಿಯಾಗಲು ಬಂದಾಗ ದಂಪತಿ ನಡುವೆ ಮತ್ತೆ ತೀವ್ರ ಜಗಳ ನಡೆದಿದೆ. ಕೋಪದ ಭರದಲ್ಲಿ, ಆತ ತನ್ನ ಮಗನನ್ನು ಬಾಲ್ಕನಿಗೆ ಕರೆದೊಯ್ದು ಅಲ್ಲಿಂದ ಸುಮಾರು 21 ಅಡಿ ಕೆಳಗೆ ಎಸೆದಿದ್ದಾನೆ, ನಂತರ ತಾನೂ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ, ಶುಕ್ರವಾರ ರಾತ್ರಿ ಮಾನ್ ಸಿಂಗ್ ತನ್ನ ಕುಟುಂಬವನ್ನು ಭೇಟಿಯಾಗಲು ತನ್ನ ಮನೆಗೆ ಬಂದಾಗ ಮದ್ಯದ ಅಮಲಿನಲ್ಲಿದ್ದ ಎಂದು ಪೂಜಾ ಅವರ ಅಜ್ಜಿ ಆರೋಪಿಸಿದ್ದಾರೆ. ಮಾನ್ ಸಿಂಗ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ