ನೇಕಾರರಿಗೆ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಸಹಾಯಧನ ಶೇ.50ರಷ್ಟು ಹೆಚ್ಚಳಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

ಬೆಂಗಳೂರು: ವಿದ್ಯುತ್ ಕೈಮಗ್ಗದಲ್ಲಿ ಕೆಲಸ ಮಾಡುತ್ತಿರುವ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆ, 2 ಲಕ್ಷ ರೂ.ಗಳ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, 5 ಎಚ್ ಪಿ ವರೆಗೆ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಶನಿವಾರ 48 ಜಿಎಸ್ ಟಿ ಕೌನ್ಸಿಲ್ ಸಭೇಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನೇಕಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಾಯಿತು. ನೇಕಾರರಿಗೆ 2 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ತೀರ್ಮಾನಿಸಲಾಯಿತು. 5 ಎಚ್‍.ಪಿ. ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ತಮಿಳುನಾಡು ಮಾದರಿಯಲ್ಲಿ ಉಚಿತ ವಿದ್ಯುತ್ ಒದಗಿಸುವುದು ಹಾಗೂ ನಿಗದಿತ ದರದಲ್ಲಿ ಶೇ. 50 ರಿಯಾಯಿತಿ ನೀಡಲು ತೀರ್ಮಾನಿಸಲಾಯಿತು ಎಂದರು. ವೃತ್ತಿಪರ ನೇಕಾರರ ಕೈಮಗ್ಗಕ್ಕೆ ಈಗ ಕೈಗಾರಿಕಾ ಇಲಾಖೆಯಿಂದ ಶೇ.30ರಷ್ಟು ಸಹಾಯಧನ ನೀಡಲಾಗುತ್ತಿದ್ದು, ಅದನ್ನು ಶೇ. 50 ರಷ್ಟು ಹೆಚ್ಚಿಸುವ ಬೇಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೇಕಾರ ಸಮ್ಮಾನ ಯೋಜನೆಯಡಿ 46000 ಕೈಮಗ್ಗ ನೇಕಾರರಿಗೆ 5000 ರೂ.ಗಳನ್ನು ಡಿಬಿಟಿ ಮಾಡಲಾಗಿದೆ. ನೇಕಾರರ ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ ಸರ್ಟಿಫಿಕೇಟ್ ನೀಡಲು ತೀರ್ಮಾನಿಸಲಾಗಿದೆ. ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ “ಗುಡಿ ಕೈಗಾರಿಕೆ”ಗಳೆಂದು ಪರಿಗಣಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕೈಮಗ್ಗ ನಿಗಮದ ಮೂಲಕ ಸಮವಸ್ತ್ರ ಪೂರೈಕೆ:
ಸರ್ಕಾರದ ನೇಕಾರ (ಕೈಮಗ್ಗ ಮತ್ತು ವಿದ್ಯುತ್ ಚಾಲಿತ) ನಿಗಮಗಳ ಉತ್ಪಾದನಾ ಸಾಮರ್ಥ್ಯದ ಅನುಗುಣವಾಗಿ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಲಾಗುವುದು ಹಾಗೂ ಉಳಿದಿದ್ದಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಯಿತು. ಡಿಸೆಂಬರ್ ತಿಂಗಳಿನಲ್ಲಿಯೇ ಕಾರ್ಯಾದೇಶ ಮಾಡಿ, ಸಕಾಲದಲ್ಲಿ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ವಿವಿಧ ಇಲಾಖೆಗಳ ಸಮವಸ್ತ್ರದ ಅಗತ್ಯತೆಯ ಶೇ. 25ರಷ್ಟನ್ನು ಕೈಮಗ್ಗ ನಿಗಮದ ಮೂಲಕ ಖರೀದಿಸಲು ತೀರ್ಮಾನಿಸಲಾಯಿತು ಎಂದರು.
ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನು ಡಿಸೆಂಬರ್ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರಕ ಮಾಹಿತಿಗಳನ್ನು ಸಂಗ್ರಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement