ಗಡಿ ವಿವಾದ: ಮಹಾರಾಷ್ಟ್ರ ಸರ್ಕಾರ ವಿರುದ್ಧ ಸದನದಲ್ಲಿ ಖಂಡನಾ ನಿರ್ಣಯ ಮಂಡನೆಗೆ ಒಮ್ಮತದ ನಿರ್ಧಾರ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ (ಡಿಸೆಂಬರ್‌ ೨೧) ಮಹಾರಾಷ್ಟ್ರ ಸರ್ಕಾರ ವಿರುದ್ಧ ಖಂಡನಾ ನಿರ್ಣಯವನ್ನು ಉಭಯ ಸದನಗಳಲ್ಲಿ ಮಂಡಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಕರ್ನಾಟಕ ಗಡಿ ವಿಚಾರವಾಗಿ ನಿಲುವಳಿ ಸೂಚನೆ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಅವರ ನಡೆ ವಿರುದ್ಧ ಉಭಯ ಸದನ ಮೂಲಕ ಖಂಡನಾ ನಿರ್ಣಯ ಮಂಡಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು, ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಣಯ ಪಾಸ್ ಮಾಡಿ ಪಾಠ ಕಲಿಸೋಣ ಎಂದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಗಡಿ ವಿವಾದದ ವಿಚಾರದಲ್ಲಿ ಕನ್ನಡಿಗರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಗಡಿ ವಿವಾದ ಮುಗಿದ ಅಧ್ಯಾಯ ಎಂಬುದಾಗಿ ಮಹಾರಾಷ್ಟ್ರಕ್ಕೆ ಬಲವಾದ ಸಂದೇಶ ರವಾನಿಸಲು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಮುಕ್ತಾಯವಾಗಿದೆ ಎಂದು ರಾಜ್ಯ ಸರ್ಕಾರ ಪದೇ ಪದೇ ಪ್ರತಿಪಾದಿಸುತ್ತಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳುವ ಅಗತ್ಯವೇನು ಎಂದು ವಿವಾದದ ಮೇಲಿನ ಚರ್ಚೆಯ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು. ‘ಮಹಾರಾಷ್ಟ್ರದ ನಾಯಕತ್ವವು ತನ್ನ ರಾಜಕೀಯ ಲಾಭಕ್ಕಾಗಿ ಪದೇ ಪದೇ ಈ ವಿಷಯವನ್ನು ಕೆದಕಲು ಪ್ರಯತ್ನಿಸುತ್ತಿರುವ ಅಮಿತ್ ಶಾ ಅವರ ಸಭೆಗೆ ಹಾಜರಾಗಬಾರದಿತ್ತು. ರಾಜ್ಯ ಸರ್ಕಾರ ನೆರೆ ರಾಜ್ಯದವರ ಒತ್ತಡ ತಂತ್ರಕ್ಕೆ ಎಂದಿಗೂ ಮಣಿಯಬಾರದು ಎಂದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಸುಪ್ರೀಂ ಕೋರ್ಟ್‌ನಲ್ಲಿ ಗಡಿ ಪ್ರಕರಣದ ಕಾನೂನುಬದ್ಧತೆಯನ್ನು ಎತ್ತಿ ಹಿಡಿದ ಬೊಮ್ಮಾಯಿ, ಗಡಿ ಪ್ರಕರಣದ ನಿರ್ವಹಣೆಯ ಬಗ್ಗೆ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ವಾದಿಸುತ್ತದೆ ಎಂದು ಹೇಳಿದರು. ಗಡಿ ವಿವಾದದ ವಿಷಯ ಸುಪ್ರೀಂ ಕೋರ್ಟ್‌ನ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅದನ್ನು ನಿಭಾಯಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಎಂಬುದು ಕರ್ನಾಟಕದ ವಾದವಾಗಿದೆ. 2004 ರಲ್ಲಿ ಮಹಾರಾಷ್ಟ್ರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಿದ್ದು, ವಿಚಾರಣೆ ಇನ್ನೂ ನಡೆಯಬೇಕಿದೆ ಎಂದು ಬೊಮ್ಮಾಯಿ ಹೇಳಿದರು.
1881 ರ ಜನಗಣತಿಯ ಪ್ರಕಾರ, ಬೆಳಗಾವಿ ಪ್ರದೇಶದಲ್ಲಿ 64.39 ಪ್ರತಿಶತ ಜನರು ಕನ್ನಡ ಮಾತನಾಡುವವರಾಗಿದ್ದರೆ ಕೇವಲ 24.04 ಮರಾಠಿ ಭಾಷಿಕರಿದ್ದರು. ಹೀಗಾಗಿ ಫಜಲ್ ಅಲಿ ಆಯೋಗವು ವಾಸ್ತವಗಳ ಆಧಾರದ ಮೇಲೆ ಬೆಳಗಾವಿಯನ್ನು ಕರ್ನಾಟಕಕ್ಕೆ ಸರಿಯಾಗಿ ಹಂಚಿಕೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರತಿ ರಾಜ್ಯದಿಂದ ಮೂವರನ್ನೊಳಗೊಂಡ ಆರು ಸಚಿವರ ಸಮಿತಿಯನ್ನು ರಚಿಸುವ ಅಮಿತ್ ಶಾ ಅವರ ಸಲಹೆಗೆ ನೀವು ಏಕೆ ಒಪ್ಪಿದ್ದೀರಿ ಎಂದು ಮಾಜಿ ಸಚಿವ ಎಚ್‌ಕೆ ಪಾಟೀಲ ಅವರು ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬೊಮ್ಮಾಯಿ ಅವರು, ರಾಜ್ಯ ಸರ್ಕಾರವು ಗಡಿ ವಿವಾದವು ಮುಚ್ಚಿದ ಅಧ್ಯಾಯ ಎಂದು ಪದೇ ಪದೇ ಪ್ರತಿಪಾದಿಸಿದೆ. `ಇದರಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವೂ ಇರುವುದರಿದ ಕೇಂದ್ರ ಗೃಹ ಸಚಿವರು ಸಭೆ ಕರೆದರೆ ಸಭೆಗೆ ಹಾಜರಾಗಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಎರಡೂ ರಾಜ್ಯಗಳ ನಡುವಿನ ಗಡಿರೇಖೆಯ ವಿಷಯವು ಮುಚ್ಚಿದ ಅಧ್ಯಾಯವಾಗಿದೆ ಮತ್ತು ಕರ್ನಾಟಕದ ಒಂದು ಇಂಚು ಭೂಮಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಪುನರುಚ್ಚರಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement