ಪದ್ಮಶ್ರೀ ಪುರಸ್ಕೃತ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ ವಿಧಿವಶ

ಶಿವಮೊಗ್ಗ: ಪದ್ಮಶ್ರೀ ಪುರಸ್ಕೃತ ಖ್ಯಾತ ಗಮಕ ಗಾಯನ ಕಲಾವಿದ ಹೊಸಹಳ್ಳಿ ಆರ್. ಕೇಶವಮೂರ್ತಿ (88) ಅವರು ವಿಧಿವಶರಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಆರ್ ಕೇಶವಮೂರ್ತಿ ಅವರು ಮೂರ್ನಾಲ್ಕು ದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು, ಇಂದು, ಬುಧವಾರ ಅವರು ಅವರು ಸ್ವಃಗೃಹದಲ್ಲಿ ನಿಧನರಾಗಿದ್ದಾರೆ. ಅವರು 82 ವರ್ಷದ ಪತ್ನಿ ರಾಜೇಶ್ವರಿ ಹಾಗೂ ಪುತ್ರಿ ಉಷಾ ಅವರನ್ನು ಅಗಲಿದ್ದಾರೆ.
2022ರಲ್ಲಿ ಕೇಂದ್ರ ಸರ್ಕಾರದ ದೇಶದ ಪ್ರತಿಷ್ಠಿತ ಪ್ರಶಸ್ತಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಇದೇ ವರ್ಷ ಮಾರ್ಚ್ 25ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಕೇಶವಮೂರ್ತಿ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು. ಗುರುವಾರ ಹೊಸಹಳ್ಳಿ ಗ್ರಾಮದ ಹೊರ ವಲಯದಲ್ಲಿ ಸರ್ಕಾರಿ ಗೌರವಗಳೊಂದಿಗೆ ಕೇಶವಮೂರ್ತಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ತಮ್ಮ 16ನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ಗಮಕ ವಾಚನ ಮಾಡುವುದನ್ನು ಅವರು ರೂಢಿಸಿಕೊಂಡಿದ್ದರು.

ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಗಮಕ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಕೇಶವಮೂರ್ತಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. “ಶಿವಮೊಗ್ಗ ಬಳಿಯ ಮತ್ತೂರು ಹೊಸಳ್ಳಿಯ ಖ್ಯಾತ ಗಮಕ ಕಲಾವಿದರಾದ ಪದ್ಮಶ್ರೀ ಶ್ರೀ ಹೆಚ್‌.ಆರ್.ಕೇಶವಮೂರ್ತಿ ಅವರು ನಿಧನರಾದ ಸುದ್ದಿ ಅತ್ಯಂತ ಆಘಾತ ತಂದಿದೆ. ಅವರ ನಿಧನದಿಂದ ಒಬ್ಬ ಹಿರಿಯ ವಿದ್ವಾಂಸರನ್ನು ನಾಡು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ಸಂತಾಪಗಳನ್ನು ಕೋರುತ್ತೇನೆ. ಓಂ ಶಾಂತಿ” ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement