ಗಡಿ ವಿವಾದ: ಮಹಾರಾಷ್ಟ್ರದ ನಡೆ ವಿರುದ್ಧ ಖಂಡನಾ ನಿರ್ಣಯ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ

ಬೆಳಗಾವಿ: ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಹಾರಾಷ್ಟ್ರದ ವಿರುದ್ಧ ಗುರುವಾರ ಖಂಡನಾ ನಿರ್ಣಯ ಮಂಡಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಖಂಡನಾ ನಿರ್ಣಯ ಮಂಡನೆ ಮಾಡಿದರು. ಇದಕ್ಕೆ ಸರ್ವಾನುಮತದಿಂದ ಸದನ ಒಪ್ಪಿಗೆ ಸೂಚಿಸಿತು.
ಮಹಾಜನ ಆಯೋಗದ ವರದಿ ಮಂಡಿಸಿ 66 ವರ್ಷ ಕಳೆದಿವೆ. ಈ ವರ್ಷಗಳಲ್ಲಿ ಎರಡೂ ರಾಜ್ಯಗಳ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಆದಾಗ್ಯೂ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಗಡಿಯ ಬಗ್ಗೆ ದಾವೆ ಹೂಡಿ, ಅಂದಿನಿಂದಲೂ ಎರಡೂ ರಾಜ್ಯಗಳ ಜನರ ನಡುವಿನ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. 2004 ರಿಂದ ಈವರೆಗೂ ಸುಪ್ರೀಂ ಕೋರ್ಟಿನಲ್ಲಿ ಮಹಾರಾಷ್ಟ್ರದ ದಾವೆಯನ್ನು ಕೈಗೆತ್ತಿಕೊಂಡಿಲ್ಲ. ಯಾಕೆಂದರೆ, ಸಂವಿಧಾನದ 3ನೇ ಪರಿಚ್ಛೇದದ ಪ್ರಕಾರ ಈ ಮರುಪರಿಶೀಲನೆ ಮಾಡುವ ಪರಮಾಧಿಕಾರ ಸಂಸತ್ತಿಗೆ ಮಾತ್ರ ಇದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗವನ್ನು ರಚಿಸಿದ್ದು, ಈ ಆಯೋಗವು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದೆ. ಅಲ್ಲದೆ, ಇತ್ತೀಚೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾ, ಶಿವರಾಜ ಪಾಟೀಲ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ನಮ್ಮ ನಿಲುವನ್ನು ಸಮರ್ಥವಾಗಿ ಪ್ರತಿಪಾದನೆ ಮಾಡಲು ಮಾರ್ಗದರ್ಶನ ಮಾಡುತ್ತಿದ್ದಾರೆ. ಹಿರಿಯ ವಕೀಲ ಮುಕುಲ್ ರೋಹಟಗಿ ನೇತೃತ್ವದಲ್ಲಿ ಐದು ಜನ ನುರಿತ ವಕೀಲರ ತಂಡ ರಚನೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

ಇತ್ತೀಚೆಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರದ ನಾಯಕರು ಕೊಡುತ್ತಿರುವ ಎಲ್ಲ ಹೇಳಿಕೆಗಳು ಅತ್ಯಂತ ಖಂಡನೀಯ ಮತ್ತು ಮಹಾರಾಷ್ಟ್ರದ ಸಚಿವರು ಕಾನೂನು ಸುವ್ಯವಸ್ಥೆ ಸೂಕ್ಷ್ಮವಿದ್ದಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿ, ಪ್ರಚೋದಿಸಲು ಯತ್ನಿಸುವ ಕಾರ್ಯವೂ ಖಂಡನೀಯ. ಕೇಂದ್ರದ ಗೃಹ ಸಚಿವರು ಎರಡೂ ರಾಜ್ಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ನೀಡಿರುವ ಸೂಚನೆಯನ್ನು ಸಹ ಮಹಾರಾಷ್ಟ್ರ ಉಲ್ಲಂಘಿಸುತ್ತಿದೆ. ಇದನ್ನು ನಿಯಂತ್ರಿಸಬೇಕೆಂದು ಮಹಾರಾಷ್ಟ್ರಕ್ಕೆ ಸರ್ಕಾರಕ್ಕೆ ಸೂಚಿಸುತ್ತಾ, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೂ ರಾಜ್ಯ ಸರ್ಕಾರ ತರುತ್ತದೆ.
ಕರ್ನಾಟಕದ ನೆಲ,ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ಸದಸ್ಯರೆಲ್ಲರ ಭಾವನೆಯು ಒಂದೇ ಆಗಿದ್ದು, ಇದಕ್ಕೆ ಧಕ್ಕೆ ಆದಾಗ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ಹಾಗೂ ಮಹಾರಾಷ್ಟ್ರದ ಜನತೆ ಅನಾವಶ್ಯಕವಾಗಿ ಸೃಷ್ಟಿಸಿರುವ ಗಡಿ ವಿವಾದವನ್ನು ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ. ಖಂಡನಾ ನಿರ್ಣಯವನ್ನು ಸಭಾಧ್ಯಕ್ಷರು ಮತಕ್ಕೆ ಹಾಕಿದರು. ನಂತರ ಸದನ ಸರ್ವಾನುಮತದಿಂದ ಅದನ್ನು ಅಂಗೀಕರಿಸಿತು.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement