
ಶಿವಮೊಗ್ಗ: ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುವುದರಿಂದ ಕನಿಷ್ಠ ತಮ್ಮ ಮನೆಗಳಲ್ಲಿ ಆತ್ಮ ರಕ್ಷಣೆಗಾಗಿ ಚಾಕುಗಳನ್ನು ಇಟ್ಟುಕೊಳ್ಳಿ ಎಂದು ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಅವರು ಹಿಂದೂ ಸಮುದಾಯಕ್ಕೆ ಕರೆ ನೀಡಿದರು.
ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ಮತ್ತು ಘನತೆಗೆ ಧಕ್ಕೆಯಾದರೆ ಉತ್ತರ ನೀಡುವ ಹಕ್ಕು ಹಿಂದೂಗಳಿಗೆ ಇದೆ ಎಂದು ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಹೇಳಿದರು.
ಭಾನುವಾರ ಇಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿ, ಅವರು ಏನನ್ನೂ ಮಾಡದಿದ್ದರೂ ಅವರು ಲವ್ ಜಿಹಾದ್ ಮಾಡುತ್ತಾರೆ. ಅವರು ಲವ್ ಮಾಡಿದರೂ ಅದರಲ್ಲಿ ಜಿಹಾದ್ ಮಾಡುತ್ತಾರೆ. ನಾವು (ಹಿಂದೂಗಳು) ಕೂಡ ಪ್ರೀತಿಸುತ್ತೇವೆ, ದೇವರನ್ನು ಪ್ರೀತಿಸುತ್ತೇವೆ, ಸನ್ಯಾಸಿ ತನ್ನ ದೇವರನ್ನು ಪ್ರೀತಿಸುತ್ತಾನೆ” ಎಂದು ಠಾಕೂರ್ ಹೇಳಿದರು.
ಲವ್ ಜಿಹಾದ್ ಬಲೆಗೆ ಬೀಳದಂತೆ ನಿಮ್ಮ ಹುಡುಗಿಯರನ್ನು ರಕ್ಷಿಸಿ, ಅವರಿಗೆ ಸರಿಯಾದ ಮೌಲ್ಯಗಳನ್ನು ಕಲಿಸಿ ಎಂದು ಹೇಳಿದ ಅವರು, ಶಿವಮೊಗ್ಗದ ಹರ್ಷ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಯ ಬಗ್ಗೆ ಮಾತನಾಡಿದ ಅವರು, ಆತ್ಮರಕ್ಷಣೆಗಾಗಿ ಮನೆಯಲ್ಲಿ ಚಾಕುಗಳನ್ನು ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ನಿಮ್ಮ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ, ಆತ್ಮ ರಕ್ಷಣೆಗಾಗಿ ಏನಿಲ್ಲವೆಂದರೂ, ತರಕಾರಿಗಳನ್ನು ಕತ್ತರಿಸಲು ಬಳಸುವ ಚಾಕುಗಳನ್ನು ಇಟ್ಟುಕೊಳ್ಳಿ. ಯಾರಾದರೂ ನಮ್ಮ ಮನೆಗೆ ನುಸುಳಿ ನಮ್ಮ ಮೇಲೆ ದಾಳಿ ಮಾಡಿದರೆ, ಅದಕ್ಕೆ ತಕ್ಕ ಉತ್ತರ ನೀಡುವುದು ನಮ್ಮ ಹಕ್ಕು ಎಂದು ಅವರು ಹೇಳಿದರು.
ಮಿಷನರಿ ಸಂಸ್ಥೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ವಿರುದ್ಧ ಪೋಷಕರಿಗೆ ಸಲಹೆ ನೀಡಿದ ಠಾಕೂರ್, “ಇದನ್ನು ಮಾಡುವುದರಿಂದ ನೀವು ವೃದ್ಧಾಶ್ರಮಗಳ ಬಾಗಿಲುಗಳನ್ನು ತೆರೆಯುತ್ತೀರಿ” ಎಂದು ಹೇಳಿದರು. “… ಅಲ್ಲಿ ಓದಿದರೆ ಮಕ್ಕಳು ನಿಮ್ಮವರಾಗುವುದಿಲ್ಲ ಮತ್ತು ನಿಮ್ಮ ಸಂಸ್ಕೃತಿಯವರೇ ಆಗುವುದಿಲ್ಲ. ಅವರು ವೃದ್ಧಾಶ್ರಮಗಳ ಸಂಸ್ಕೃತಿಯಲ್ಲಿ ಬೆಳೆದು ಸ್ವಾರ್ಥಿಗಳಾಗುತ್ತಾರೆ” ಎಂದು ಅವರು ಹೇಳಿದರು.
ಹಿಂದೂ ಉಗ್ರವಾದ ಪದ ಬಳಕೆಗೆ ಕಿಡಿ
ಹಿಂದೂ ಉಗ್ರವಾದ ಎಂಬ ಪದಗಳನ್ನು ಬಳಸುವ ಸಮಾಜದ ಒಂದು ವರ್ಗದವರ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಿಡಿಕಾರಿದರು. ಒಂದು ವೇಳೆ ಹಿಂದೂಗಳು ಉಗ್ರವಾದಿಗಳೇ ಆಗಿದ್ದರೆ ಭಾರತದಲ್ಲಿ ಬೇರೆ ಯಾವುದೇ ಧರ್ಮ ಇಂದು ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದರು.
“ನಿಮ್ಮ ಮನೆಯಲ್ಲಿ ಪೂಜೆಗಳನ್ನು ಮಾಡಿ, ನಿಮ್ಮ ಧರ್ಮ ಮತ್ತು ಶಾಸ್ತ್ರದ ಬಗ್ಗೆ ಓದಿ, ನಿಮ್ಮ ಮಕ್ಕಳಿಗೆ ಅದರ ಬಗ್ಗೆ ಕಲಿಸಿ, ಇದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ತಿಳಿಯುತ್ತದೆ” ಎಂದು ಅವರು ಹೇಳಿದರು.



ನಿಮ್ಮ ಕಾಮೆಂಟ್ ಬರೆಯಿರಿ