ಮೀಸಲಾತಿ ಘೋಷಣೆ: ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿಯಿಂದ ಎಲ್ಲದಕ್ಕೂ ಸ್ಪಷ್ಟತೆ ಸಿಗಲಿದೆ-ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಮೀಸಲಾತಿ ನೀಡಲು ಸಂವಿಧಾನಾತ್ಮಕವಾಗಿ ತೊಡಕಿಲ್ಲ, ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿ ನಂತರ ಎಲ್ಲ ಸ್ಪಷ್ಟತೆಯೂ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಸಂವಿಧಾನಾತ್ಮಕವಾಗಿ ತೊಡಕಿಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ನೀಡಿದೆ. ಆಯೋಗವು ಅಂತಿಮ ವರದಿ ನೀಡಿದ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಮೀಸಲಾತಿ ಜಾರಿ ವಿಚಾರದಲ್ಲಿ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಯಾವುದೇ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. ಕೆಲ ವರ್ಗದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಹಿನ್ನಡೆಯಾಗಿದೆ. ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಮೀಸಲಾತಿ ಘೋಷಣೆ ಮಾಡಿದ್ದೇವೆ. ಈಗಿರುವ ಹಿಂದುಳಿದ ವರ್ಗಗಳ ಮೀಸಲಾತಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರಿಗೆ ಇದನ್ನು ಮಾಡಲು ಸಾಧ್ಯವಾಗಿಲ್ಲ. ಈಗ ನಾವು ಮಾಡಿದ್ದಕ್ಕೆ ಅವರಿಗೆ ಸಮಸ್ಯೆಯಾಗಿದೆ ಎಂದು ಟೀಕಿಸಿದರು.

ಮಹಾದಾಯಿ ವಿಚಾರವಾಗಿ ಮಾತನಾಡಿದ ಅವರು, ಮಹದಾಯಿ ಯೋಜನೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುವುದು ಬೇಡ. ಮಹದಾಯಿ ಯೋಜನೆಯ ಡಿಪಿಆರ್’ಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಪ್ರತಿಯ ಕೊನೆಯಲ್ಲಿ ಸಹಿ ಮತ್ತು ದಿನಾಂಕವಿದೆ. ಕಾಂಗ್ರೆಸ್ ಯಾವ ಉದ್ದೇಶಕ್ಕೆ ಆರೋಪಿಸುತ್ತಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ಮಹದಾಯಿ ವಿಷಯಕ್ಕಾಗಿ ನಾವು ಮತ್ತು ಕಾಂಗ್ರೆಸ್ 25 ವರ್ಷಗಳಿಂದ ಹೋರಾಟ ನಡೆಸಿದ್ದೆವು. ಮಹದಾಯಿ ಹೋರಾಟಕ್ಕೆ ಈಗ ತಾರ್ಕಿಕ ಜಯ ಸಿಕ್ಕಿದೆ. ಈ ವೇಳೆ ಲೋಪದೋಷ ಹುಡುಕುವುದು ಕಾಂಗ್ರೆಸ್‌ನವರ ಮನಸ್ಥಿತಿ ತೋರಿಸುತ್ತದೆ. ಕಾಂಗ್ರೆಸ್​ ನಾಯಕರ ಟೀಕೆ ಟಿಪ್ಪಣಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಂಒಎಫ್ ಕ್ಲಿಯರೆನ್ಸ್ ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement