ಚಲನಚಿತ್ರ ಪ್ರೇಕ್ಷಕರನ್ನು ಹೊರಗಿನ ಆಹಾರ, ಪಾನೀಯ ಕೊಂಡೊಯ್ಯದಂತೆ ನಿಯಂತ್ರಿಸುವ ಹಕ್ಕು ಸಿನಿಮಾ ಥಿಯೇಟರ್‌ ಮಾಲೀಕರಿಗಿದೆ : ಸುಪ್ರೀಂ ಕೋರ್ಟ್‌

ನವದೆಹಲಿ: ಪ್ರೇಕ್ಷಕರು ಹೊರಗಡೆಯಿಂದ ಆಹಾರ ಮತ್ತು ಪಾನೀಯವನ್ನು(Food and Beverage) ಚಲನಚಿತ್ರ ಮಂದಿರಕ್ಕೆ (Cinema Halls) ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಚಿತ್ರಮಂದಿರಗಳು ಹಾಲ್‌ಗಳ ಒಳಗೆ ಆಹಾರ ಮತ್ತು ಪಾನೀಯಗಳ ಮಾರಾಟಕ್ಕೆ ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಲು ಸಂಪೂರ್ಣವಾಗಿ ಅರ್ಹವಾಗಿವೆ ಮತ್ತು ಆವರಣದೊಳಗೆ ಹೊರಗಿನ ಆಹಾರ ಪದಾರ್ಥಗಳನ್ನು ನಿಷೇಧಿಸುವ ಹಕ್ಕನ್ನು ಹೊಂದಿವೆ ಎಂದು ಅದು ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠವು, “ಸಿನಿಮಾ ನೋಡುಗರು ಅದನ್ನು ಸೇವಿಸದಿರುವ ಆಯ್ಕೆಯನ್ನೂ ಹೊಂದಿರುತ್ತಾರೆ” ಎಂದು ಹೇಳಿದೆ. ಆದರೆ, ಇದೇವೇಳೆ ತಂದೆ-ತಾಯಿಗಳು ತಮ್ಮ ಶಿಶುಗಳಿಗೆ ಕೊಂಡೊಯ್ಯುವ ಆಹಾರವನ್ನು ಚಿತ್ರಮಂದಿರಗಳು ವಿರೋಧಿಸಬಾರದು ಎಂದು ಪೀಠವು ಪುನರುಚ್ಚರಿಸಿದೆ.

ಸಿನೆಮಾಗಳು ಖಾಸಗಿ ಆಸ್ತಿಗಳು. ಮಾಲೀಕರು ನಿಷೇಧದ ಹಕ್ಕುಗಳ ಬಗ್ಗೆ ನಿರ್ಧರಿಸಬಹುದು. ಒಬ್ಬರು ಚಿತ್ರಮಂದಿರದೊಳಗೆ ಜಿಲೇಬಿ (ಸಿಹಿ ಖಾದ್ಯ) ತೆಗೆದುಕೊಳ್ಳಲು ಬಯಸಿದರೆ, ಅದನ್ನು ಆಕ್ಷೇಪಿಸುವ ಹಕ್ಕು ಮಾಲೀಕರಿಗೆ ಇದೆ. ಜಿಲೇಬಿಯನ್ನು ತಿಂದ ನಂತರ, ವ್ಯಕ್ತಿಯು ಕುರ್ಚಿಗೆ ತನ್ನ ಕೈಗಳನ್ನು ಒರೆಸಬಹುದು ಮತ್ತು ಅನಗತ್ಯವಾಗಿ ಅದನ್ನು ಹಾಳುಮಾಡಬಹುದು ಎಂದು ವಿಚಾರಣೆಯ ವೇಳೆ ಸಿಜೆಐ ಮೌಖಿಕವಾಗಿ ಹೇಳಿದರು.
“ಶುದ್ಧ ಕುಡಿಯುವ ನೀರು ಮತ್ತು ಶಿಶುಗಳಿಗೆ ಆಹಾರವನ್ನು ಸಹ ಅನುಮತಿಸಲಾಗಿದೆ, ಆದರೆ ಪ್ರತಿಯೊಂದು ಆಹಾರವನ್ನು ಆವರಣದೊಳಗೆ ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿನಿಮಾ ಥಿಯೇಟರ್‌ನವರು, ಸಿನಿಮಾ ಪ್ರೇಕ್ಷಕರು ತಮ್ಮ ಸ್ವಂತ ಆಹಾರ ಮತ್ತು ಪಾನೀಯಗಳನ್ನು ಚಲನಚಿತ್ರ ಮಂದಿರಗಳಿಗೆ ಕೊಂಡೊಯ್ಯುವುದನ್ನು ತಡೆಯಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿರ್ದೇಶನವನ್ನು ನ್ಯಾಯಾಲಯ ತಳ್ಳಿಹಾಕಿದೆ.
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ 2018 ರ ತೀರ್ಪನ್ನು ಪ್ರಶ್ನಿಸಿ ಥಿಯೇಟರ್ ಮಾಲೀಕರು ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಲ್ಲಿಸಿದ ಮೇಲ್ಮನವಿಗಳ ಬ್ಯಾಚ್ ಅನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement