ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ಮಾಹಿತಿ

ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಜನವರಿ 9ರಂದು ಬೆಳಗ್ಗೆ 11:30ಕ್ಕೆ ವೀಡಿಯೊ ಕಾನ್ಸರೆನ್ಸ್‌ ಮೂಲಕ ಸ್ಥಳನಿಯುಕ್ತಿ ಕೌನ್ಸೆಲಿಂಗ್‌ ನಡೆಸಲು ನಿರ್ಧರಿಸಲಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳ ಮಾಹಿತಿಯನ್ನು ಇಲಾಖಾ ಜಾಲತಾಣ www.pue.karnataka.gov.in ಈ ಲಿಂಕ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದ್ದು, ಅಭ್ಯರ್ಥಿಗಳು ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ಸಮಯದಲ್ಲಿ ಕೆಲವು ಸೂಚನೆಗಳನ್ನು ಪಾಲಿಸಲು ಸೂಚಿಸಲಾಗಿದೆ:

ಅಭ್ಯರ್ಥಿಗಳು ದಿನಾಂಕ: 09-01-2023 ರಂದು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಒಂದು ಗಂಟೆ ಮುಂಚಿತವಾಗಿ ಹಾಜರಾಗಿ ಜಿಲ್ಲಾ ಉಪನಿರ್ದೇಶಕರಲ್ಲಿ ವರದಿ ಮಾಡಿಕೊಳ್ಳಬೇಕು. ಆಯ್ಕೆಗೊಂಡ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ (ನೈಜತೆ ಪ್ರಮಾಣ ಪತ್ರ ಸ್ವೀಕೃತವಾದ ಅಥವಾ ಸ್ವೀಕೃತವಾಗದೇ ಇರುವ) ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು.
ಹಾಜರಾಗುವ ಸಂದರ್ಭದಲ್ಲಿ, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಾಖಲೆ ಪರಿಶೀಲನೆ ವೇಳೆ ನೀಡಲಾಗಿದ್ದ ಸ್ವೀಕೃತಿ ಪತ್ರದ ಪ್ರತಿ ಮತ್ತು ಆಯ್ಕೆಪಟ್ಟಿ ಹಾಗೂ ಚೀಟಿಯನ್ನು(ಆಧಾರ/ಮತದಾರರ ಗುರುತಿನ ಚೀಟಿ) ಹೊಂದಿರಬೇಕು. ಅಭ್ಯರ್ಥಿಗಳು ವಾಸಸ್ಥಳಕ್ಕೆ ಹತ್ತಿರದ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಸ್ಥಳನಿಯುಕ್ತಿ ಕೌನ್ಸೆಲಿಂಗ್‌ಗೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಸ್ಥಳನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಕೇಂದ್ರ ಕಚೇರಿಯಲ್ಲಿ ಹಾಜರಾಗಬಾರದು ಎಂದು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗುವ ಸಂದರ್ಭದಲ್ಲಿ ಕೌನ್ಸೆಲಿಂಗ್‌ ಕೊಠಡಿಯಲ್ಲಿ ಪೋಷಕರನ್ನಾಗಲೀ ಅಥವಾ ಇತರರನ್ನಾಗಲೀ ಕರತರುವಂತಿಲ್ಲ. ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಕೌನ್ಸೆಲಿಂಗ್‌ನಲ್ಲಿ ಪ್ರದೇಶವಾರು (ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ) ಜಿಲ್ಲೆಯಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ‘ಸಿ’ ವಲಯದ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ (‘ಸಿ’ ವಲಯದಲ್ಲಿ ಹುದ್ದೆಗಳು ಲಭ್ಯವಿಲ್ಲದಿದ್ದಲ್ಲಿ, ‘ಬಿ’ವಲಯ, ‘ಬಿ’ ವಲಯದಲ್ಲಿ ಹುದ್ದೆ ಖಾಲಿಯಿಲ್ಲದಿದ್ದಲ್ಲಿ ‘ಎ’ ವಲಯ) ಎಂದು ತಿಳಿಸಲಾಗಿದೆ.
ಕೌನ್ಸಲಿಂಗ್‌ ಸಂದರ್ಭದಲ್ಲಿ ಇಲಾಖಾ ವತಿಯಿಂದ ನೀಡಲಾಗುವ ಒಪ್ಪಿಗೆ ಪತ್ರವನ್ನು ದ್ವಿಪ್ರತಿಯಲ್ಲಿ ಪಡೆದು, ಆಯ್ಕೆ ಮಾಡಿಕೊಳ್ಳುವ ಸ್ಥಳವನ್ನು ಭರ್ತಿ ಮಾಡಿ ಜಿಲ್ಲಾ ಉಪನಿರ್ದೇಶಕರಿಂದ ಸಹಿ ಪಡೆದು, ಒಂದು ಸ್ವೀಕೃತಿ ಪ್ರತಿಯನ್ನು ಪಡೆಯಬೇಕಾಗುತ್ತದೆ, ಒಮ್ಮೆ ಆಯ್ಕೆ ಮಾಡಿಕೊಂಡ ಸ್ಥಳವನ್ನು ಬದಲಾಯಿಸಲು ಅವಕಾಶ ಇರುವುದಿಲ್ಲ. ಕೌನ್ಸೆಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳ ಪೈಕಿ ಎಲ್ಲಾ ಅಗತ್ಯ ದಾಖಲಾತಿಗಳು (ನೈಜ ಪ್ರಮಾಣ ಪತ್ರಗಳನ್ನೊಳಗೊಂಡಂತೆ) ಸ್ವೀಕೃತವಾದ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement